ADVERTISEMENT

ಧಾನ್ಯ, ಬೇಳೆಕಾಳು ಉತ್ಪಾದನೆ: ಸಾಧ್ಯವಾಗದ ಸ್ವಾವಲಂಬನೆ

ಧಾನ್ಯ ಕೃಷಿ ಯೋಜನೆ, ದ್ವಿದಳ ಧಾನ್ಯಗಳ ಯೋಜನೆಗೆ ಚಾಲನೆ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:29 IST
Last Updated 12 ಅಕ್ಟೋಬರ್ 2025, 5:29 IST
ತಿಪಟೂರು ಗುರುಕುಲಾನಂದಶ್ರಮದಲ್ಲಿ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ಯೋಜನೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು
ತಿಪಟೂರು ಗುರುಕುಲಾನಂದಶ್ರಮದಲ್ಲಿ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ಯೋಜನೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು   

ತಿಪಟೂರು: ನಗರದ ಗುರುಕುಲಾನಂದಶ್ರಮದಲ್ಲಿ ಕೋನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾತನಾಡಿ, ದೇಶದಲ್ಲಿ ಧಾನ್ಯ ಹಾಗೂ ಬೇಳೆಕಾಳು ಉತ್ಪಾದನೆ ಇನ್ನೂ ಬೇಡಿಕೆಗೆ ತಕ್ಕಷ್ಟು ಇಲ್ಲ. 1960ರ ದಶಕದಿಂದಲೇ ಆಹಾರ ಕೊರತೆ ನಿವಾರಣೆಗೆ ಹಸಿರು ಕ್ರಾಂತಿ ನಡೆದಿದೆ. ಆದರೆ ಇಂದಿನ ಸ್ಥಿತಿಯಲ್ಲಿ ದ್ವಿದಳ ಧಾನ್ಯ ಬೆಳೆಗಳ ಸ್ವಾವಲಂಬನೆಗೆ ಹೊಸ ಕ್ರಾಂತಿಯ ಅವಶ್ಯಕತೆ ಎದುರಾಗಿದೆ ಎಂದರು.

ಈ ಯೋಜನೆಯಿಂದ ರೈತರ ಕೈಗೆ ತಂತ್ರಜ್ಞಾನ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಒದಗಿಸುತ್ತದೆ. ವಿಜ್ಞಾನಾಧಾರಿತ ಕೃಷಿ ಮತ್ತು ಸಂಗ್ರಹಣೆ ವ್ಯವಸ್ಥೆ ಮೂಲಕ ರೈತನ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದರು.

ADVERTISEMENT

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಸರ್ಕಾರವು ಸಹಾಯಕವಾಗಬೇಕು. ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಬೇಕಿದೆ. ಭಾರತ ಸರ್ಕಾರವು ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಿದ್ದು, ಕೃಷಿವಲಯ ಅಭಿವೃದ್ಧಿಯಾಗಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ‘ರಾಜ್ಯ ಸರ್ಕಾರವು ರೈತರನ್ನು ಸೋಮಾರಿ ಮಾಡಿದೆ ಎಂದು ಹೇಳಿರುವ ಸಚಿವ ಸೋಮಣ್ಣ ತಮ್ಮ ಮಾತನ್ನು ವಾಪಸ್‌ ಪಡೆಯಬೇಕು. ನಮ್ಮ ಸರ್ಕಾರ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಅದರಂತೆ ವಿವಿಧ ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ’ ಎಂದರು.

ವಿವಿಧ ಇಲಾಖೆಗಳ ಸಹಯೋಗದಲ್ಲಿ ಕರಕುಶಲ ಹಾಗೂ ಯಂತ್ರೋಪಕರಣ, ಆಹಾರ ಉತ್ಪಾದನೆ ವಸ್ತು ಪ್ರದರ್ಶನ ನಡೆಯಿತು.

ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಶಾಸಕ ಜ್ಯೋತಿಗಣೇಶ್, ನಗರಸಭೆ ಅಧ್ಯಕ್ಷೆ ಮೇಘಶ್ರೀಭೂಷಣ್, ಕೃಷಿಕ ಸಮಾಜದ ಅಧ್ಯಕ್ಷ ಎಮ್.ಎಸ್.ಯೋಗೀಶ್, ಉಪವಿಭಾಗಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಮೋಹನ್‌ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ಸುದರ್ಶನ್, ಕೆವಿಕೆ ಮುಖ್ಯಸ್ಥ ಶಂಕರ್, ಪೌರಯುಕ್ತ ವಿಶ್ವೇಶ್ವರ ಬದರಗಡೆ, ಸಹಾಯಕ ಕೃಷಿ ನಿರ್ದೇಶಕ ಪವನ್‌ಕುಮಾರ್, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್, ಬಿಜೆಪಿ ಮುಖಂಡ ರವಿಹೆಬ್ಬಾಕ ಹಾಜರಿದ್ದರು.

 ಕರಕುಶಲ ಹಾಗೂ ಯಂತ್ರೋಪಕರಣ ಆಹಾರ ಉತ್ಪಾದನೆ ವಸ್ತು ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.