ತಿಪಟೂರು: ‘ರಾಜ್ಯ ಸರ್ಕಾರದ ಯಶಸ್ವಿನಿ ಸಹಕಾರಿ ಆರೋಗ್ಯ ಟ್ರಸ್ಟ್‌ನ ಟ್ರಸ್ಟಿಯಾಗಿ ನಗರದ ಕುಮಾರ್ ಆಸ್ಪತ್ರೆ ವೈದ್ಯ ಶ್ರೀಧರ್ ನೇಮಕ ಸಂಬಂಧ ಮುಖ್ಯಮಂತ್ರಿ ಬಳಿ ಕ್ಷಮೆಯಾಚಿಸಲಾಗುವುದು’ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಶ್ರೀಧರ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಮಾಡರುವ ಕೆಲಸ ಗುರುತಿಸಿ, ಇನ್ನಷ್ಟು ಕೆಲಸಕ್ಕೆ ನೆರವಾಗಬಹುದು ಎಂಬ ಉದ್ದೇಶದಿಂದ ಅವರನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಟ್ರಸ್ಟ್ ಟ್ರಸ್ಟಿಯಾಗಿ ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಆದರೆ ಶ್ರೀಧರ್ ಆರ್‌ಎಸ್‌ಎಸ್ ಕಾರ್ಯಕರ್ತ ಎನ್ನುವುದು ನನಗೆ ಗೊತ್ತಿರಲ್ಲಿಲ್ಲ. ಈ ವಿಚಾರದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಳಿ ಕ್ಷಮೆಯಾಚಿಸುತ್ತೇನೆ’ ಎಂದರು.
‘ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಅಸಮಾಧಾನವಿಲ್ಲ. ಸಿ.ಬಿ.ಶಶಿಧರ್ ಮಾತ್ರ ವಿರೋಧ ಮಾಡಿದ್ದಾರೆ. ಶ್ರೀಧರ್ ಪಕ್ಷಾತೀತ, ಜಾತ್ಯಾತೀತವಾಗಿ ಕೆಲಸ ಮಾಡುತ್ತಿದ್ದಾರೆ. ಯಶಸ್ವಿನಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ಪರಿಣಾಮಕಾರಿಯಾಗಿ ದೊರೆಯಬೇಕು ಹಾಗೂ ಅವರ ಅನುಭವ ಯೋಜನೆಯ ಯಶಸ್ವಿಗೆ ನೆರವಾಗಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು. ಆದರೆ ಈ ವಿಚಾರದಿಂದ ಸರ್ಕಾರಕ್ಕೆ ಮುಖ್ಯಮಂತ್ರಿಗೆ ಮುಜುಗರವಾಗಬಾರದು. ನಾನೇ ಖುದ್ದಾಗಿ ಮುಖ್ಯಮಂತ್ರಿ ಬಳಿ ತೆರಳಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.