ADVERTISEMENT

ಅನ್ನ, ನೀರಿಲ್ಲದೆ ಬಳಲಿದ ‘ಎತ್ತಿನಹೊಳೆ’ ಕಾರ್ಮಿಕರು

ಗ್ರಾಮಸ್ಥರ ಸಹಾಯಹಸ್ತ; ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 17:10 IST
Last Updated 31 ಮಾರ್ಚ್ 2020, 17:10 IST
ಎತ್ತಿನಹೊಳೆ ಯೋಜನೆ ಕಾಮಗಾರಿಯ ಕಾರ್ಮಿಕರು ಉಳಿದಿರುವ ಸ್ಥಳ
ಎತ್ತಿನಹೊಳೆ ಯೋಜನೆ ಕಾಮಗಾರಿಯ ಕಾರ್ಮಿಕರು ಉಳಿದಿರುವ ಸ್ಥಳ   

ತಿಪಟೂರು: ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ಚಾಲನೆಯಲ್ಲಿದ್ದು, ಕೆನಾಲ್ ಕಾಮಗಾರಿಯನ್ನು ಮಾಡುತ್ತಿದ್ದ ಪಶ್ಚಿಮ ಬಂಗಾಳದ ಸುಮಾರು 70- 80 ಕಾರ್ಮಿಕರು ಮೂರು ದಿನಗಳ ಕಾಲ ಅನ್ನ, ನೀರು ಇಲ್ಲದೇ ಬಳಲಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಜಕ್ಕನಹಳ್ಳಿ- ತಿಮ್ಲಾಪುರ ಗೊಲ್ಲರಹಟ್ಟಿ ಹೊರವಲಯದಲ್ಲಿ ತಂಗಿರುವ ಎತ್ತಿನಹೊಳೆ ಕಾಮಗಾರಿ ಯೋಜನಯ ಕೂಲಿ ಕಾರ್ಮಿಕರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂಲಸೌಕರ್ಯ, ಆಹಾರ ಪದಾರ್ಥಗಳಿಗೆ ಪರದಾಡುತ್ತಿದ್ದಾಗ ಸ್ಥಳೀಯರಾದ ತಿಮ್ಲಾಪುರ ದೇವರಾಜು, ಬಿಳಿಗೆರೆ ನಾಗೇಶ್ ಸೇರಿದಂತೆ ಹಲವರು ಅವರ ನೆರವಿಗೆ ಬಂದು ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನಲ್ಲಿ 2-3 ತಿಂಗಳಿಂದಲೂ ಎತ್ತಿನಹೊಳೆ ಯೋಜನೆಯ ಕಾಮಗಾರಿ ಆರಂಭಿಸಿದ್ದು, ಇದನ್ನು ಎಸ್ಎನ್‌ಟಿ ಕಂಪನಿ ನಡೆಸುತ್ತಿದೆ. ಈ ಕಾಮಗಾರಿಗಾಗಿ ಪಶ್ಚಿಮ ಬಂಗಾಳದ ಸುಮಾರು 70-80 ಕೂಲಿ ಕಾರ್ಮಿಕರನ್ನು 4 ತಿಂಗಳ ಹಿಂದೆ ಕರೆತರಲಾಗಿತ್ತು.

ADVERTISEMENT

ಕೊರೊನಾ ಸೋಂಕಿನ ಭೀತಿಯಲ್ಲಿ ಸರ್ಕಾರ ಲಾಕ್‍ಡೌನ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ಅಲ್ಲಿನ ಕಾರ್ಮಿಕರಿಗೆ ಗುತ್ತಿಗೆದಾರರು ಕೇವಲ 2-3 ದಿನಗಳಿಗೆ ಆಗುವಷ್ಟು ಮಾತ್ರ ಆಹಾರ ಪದಾರ್ಥಗಳನ್ನು ನೀಡಿ
ಸ್ಥಳದಿಂದ ಪಲಾಯನ ಮಾಡಿದ್ದರು. ಸ್ಥಳೀಯ ಭಾಷೆ ಬರದ ಆ ಕಾರ್ಮಿಕರ ಪರಿಸ್ಥಿತಿ ಅರ್ಥ ಮಾಡಿಕೊಂಡ ಗ್ರಾಮಸ್ಥರು ಇವರ ನೆರವಿಗೆ ಧಾವಿಸಿದ್ದಾರೆ.

ಕಂಪನಿಯ ಗುತ್ತಿಗೆದಾರರಿಗೆ ಸ್ಥಳೀಯರು ಕರೆ ಮಾಡಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದಾಗ ಕಂಪನಿಯ ಎಂಜಿನಿಯರ್‌ ಸುರೇಶ್ ಸ್ಥಳಕ್ಕೆ ಬಂದು ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಕೂಲಿ ಹಣ ಕೊಡುವ ಭರವಸೆ ನೀಡಿದ್ದಾರೆ.

ನಂತರ ತಿಪಟೂರಿನ ಡಿವೈಎಸ್‍ಪಿ ಚಂದನ್ ಕುಮಾರ್ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಶೀಲಿಸಿ ಎಂಜಿನಿಯರ್‌ ಮತ್ತು ಗುತ್ತಿಗೆದಾರರಿಗೆ ಸೂಕ್ತ ನೆರವು ನೀಡುವಂತೆ ಆದೇಶಿಸಿದ್ದಾರೆ. ನಂತರ ಎಲ್ಲರಿಗೂ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.