ADVERTISEMENT

ಯಾತ್ರಿ ನಿವಾಸಕ್ಕೆ ನಿವೇಶನದ್ದೇ ಕಂಟಕ

ಬಂಡವಾಳ ವೆಚ್ಚ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿ

ಡಿ.ಎಂ.ಕುರ್ಕೆ ಪ್ರಶಾಂತ
Published 16 ಅಕ್ಟೋಬರ್ 2019, 10:51 IST
Last Updated 16 ಅಕ್ಟೋಬರ್ 2019, 10:51 IST
ಕೆ.ರಾಕೇಶ್‌ಕುಮಾರ್‌
ಕೆ.ರಾಕೇಶ್‌ಕುಮಾರ್‌   

ತುಮಕೂರು: ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಬಂಡವಾಳ ವೆಚ್ಚ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳು ‘ನಿವೇಶನ’ದ ಸಮಸ್ಯೆಯಿಂದ ತೂಗುಯ್ಯಾಲೆಯಲ್ಲಿವೆ. ಈ ಕಾರಣದಿಂದ ಜಿಲ್ಲೆಯ 10 ಕಡೆಗಳಲ್ಲಿ ‘ಯಾತ್ರಿ ನಿವಾಸ’ ನಿರ್ಮಾಣ ಕಾಮಗಾರಿ ಹಳ್ಳ ಹಿಡಿದಿದೆ.

2018–19ನೇ ಸಾಲಿನ ಕಾಮಗಾರಿಗಳಿರಲಿ 2017–18ನೇ ಸಾಲಿನ ಕಾಮಗಾರಿಗಳೇ ಆರಂಭವಾಗಿಲ್ಲ! ‘ನಿವೇಶನ ಹಸ್ತಾಂತರಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ’ ಇಲ್ಲವೆ ನಿವೇಶನ ಅನುಮತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಷರಾ ಬರೆದಿದ್ದಾರೆ. ಇದು ನಿಜಕ್ಕೂ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಯಾತ್ರಿ ನಿವಾಸ’ಗಳು ಪ್ರವಾಸಿತಾಣಗಳಲ್ಲಿ ಜನರನ್ನು ಸೆಳೆಯುತ್ತವೆ. ಅಲ್ಲಿ ವಸತಿ ಮತ್ತು ವಿಶ್ರಾಂತಿಗೆ ಸ್ಥಳ ಇದೆ ಎಂದರೆ ಸಹಜವಾಗಿ ಪ್ರವಾಸಿಗಳು ಆ ಕಡೆ ಕಣ್ಣಾಯಿಸುವರು. ಜಿಲ್ಲೆಯ ಬಹುತೇಕ ಯಾತ್ರಿ ನಿವಾಸಗಳು ದೇವಾಲಯಗಳ ಬಳಿ ನಿರ್ಮಾಣವಾಗುತ್ತಿವೆ. ಇದು ಆ ದೇಗುಲಗಳ ಅಭಿವೃದ್ಧಿ ಮತ್ತು ಭಕ್ತರಿಗೆ ಅನುಕೂಲ ಕಲ್ಪಿಸುತ್ತದೆ.

ADVERTISEMENT

ಈಗ ಗುರುತಿಸಿರುವ ಜಾಗಗಳ ಬಗ್ಗೆ ಉಂಟಾಗಿರುವ ವಿವಾದಗಳು, ಭಿನ್ನಾಭಿಪ್ರಾಯಗಳು ‘ಯಾತ್ರಿ ನಿವಾಸ’ ಕಾಮಗಾರಿಗಳಿಗೆ ಅಡ್ಡಿಯಾಗಿವೆ. ಈ ಕಾಮಗಾರಿಗಳ ಹೊಣೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ಮತ್ತು ನಿರ್ಮಿತಿ ಕೇಂದ್ರಗಳು ಹೊತ್ತಿವೆ.

ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ನಡೆಸಿದ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ನಿವೇಶನ’ದ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಆಗ ಈ ‘ನಿವೇಶನ’ ಪ್ರಕ್ರಿಯೆಗಳ ಬಗ್ಗೆ ಅ.10ರ ಒಳಗೆ ಇಲಾಖೆಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರಿಗೆ ರವಿ ತಿಳಿಸಿದ್ದರು. ಒಂದು ವೇಳೆ ನಿವೇಶನ ಸಮಸ್ಯೆ ಮುಂದುವರಿದರೆ ಆ ಅನುದಾನವನ್ನು ವಾಪಸ್ ಪಡೆಯುವುದಾಗಿ ಎಚ್ಚರಿಸಿದ್ದರು. ಸಮಸ್ಯೆ ಪರಿಹಾರಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

2018–19ರಲ್ಲಿ ಮಂಜೂರಾದ ಗುಬ್ಬಿ ತಾಲ್ಲೂಕು ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಯಾತ್ರಿ ನಿವಾಸ, 2017–18ರಲ್ಲಿ ಮಂಜೂರಾದ ಮಧುಗಿರಿ ತಾಲ್ಲೂಕಿನ ದೊಡ್ಡದಾಳವಾಟ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಬಳಿ ಯಾತ್ರಿ ನಿವಾಸ, ಶಿರಾ ತಾಲ್ಲೂಕು ರಾಮಲಿಂಗಾಪುರ ಗ್ರಾಮದ ಮಣ್ಣಮ್ಮ ದೇವಿ ಕ್ಷೇತ್ರದ ಬಳಿ ಯಾತ್ರಿ ನಿವಾಸ, ನೇಜಂತಿ ಗ್ರಾಮದ ಲಕ್ಷ್ಮಿ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಮೂಲಸೌಕರ್ಯ ಅಭಿವೃದ್ಧಿ, ಬರಗೂರು ಬಳಿಯ ಗೋಪಿಕುಂಟೆ ಲಕ್ಷ್ಮಿ ದೇವಸ್ಥಾನದ ಬಳಿ ಯಾತ್ರಿ ನಿವಾಸ, ಪಾವಗಡ ತಾಲ್ಲೂಕು ನಿಡಗಲ್ ಗ್ರಾಮದ ರಾಮಲಿಂಗೇಶ್ವರ ಯಾತ್ರಿ ನಿವಾಸ, ತಿಪಟೂರು ತಾಲ್ಲೂಕು ದಸರೀಘಟ್ಟ ಚೌಡೇಶ್ವರಿ ದೇವಾಲಯದ ಬಳಿ ಯಾತ್ರಿ ನಿವಾಸ, ತಿಪಟೂರು ನಗರದ ಕಲ್ಲೇಶ್ವರ ಸ್ವಾಮಿ ದೇವಾಲಯದ ಬಳಿ ಯಾತ್ರಿ ನಿವಾಸ, ನೊಣವಿನಕೆರೆ ಬೇಟೆರಾಯ ಸ್ವಾಮಿ ದೇವಾಲಯದ ಬಳಿ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ನಿವೇಶನ ಹಸ್ತಾಂತರಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ.

2017–18ರಲ್ಲಿ ಮಂಜೂರಾದ ಮಧುಗಿರಿ ತಾಲ್ಲೂಕು ಬೊಮ್ಮೇತಿಮ್ಮಹಳ್ಳಿ ಉಜ್ಜನಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ನಿವೇಶನ ಅನುಮತಿ ಕಾರ್ಯ ಪ್ರಗತಿಯಲ್ಲಿದೆ.

ಅಲ್ಲದೆ ಜಿಲ್ಲೆಯಲ್ಲಿ 40 ಕಾಮಗಾರಿಗಳನ್ನು ನಾನಾ ಕಾರಣಕ್ಕೆ ಇನ್ನೂ ಪ್ರಾರಂಭಿಸಿಯೇ ಇಲ್ಲ. 8 ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ.

ಅಭಿವೃದ್ಧಿ ದೃಷ್ಟಿ; ವರದಿಗೆ ತಾತ್ಕಾಲಿಕ ತಡೆ

‘ನಿವೇಶನದ ವಿವಾದದ ವಿಚಾರವಾಗಿ ಒಮ್ಮೆ ಸರ್ಕಾರಕ್ಕೆ ವರದಿಯನ್ನು ಕೊಟ್ಟರೆ ಆ ಅನುದಾನ ವಾಪಸ್ ಹೋಗುತ್ತದೆ. ಮತ್ತೆ ಪಡೆಯುವುದು ಕಷ್ಟ. ಅನುದಾನ ವಾಪಸ್ ಹೋದರೆ ಸಹಜವಾಗಿ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಹಿನ್ನಡೆ ಆಗುತ್ತದೆ. ಆ ಕಾರಣಕ್ಕೆ ನಾನೇ ವರದಿ ನೀಡುವುದಕ್ಕೆ ತಡ ಮಾಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್.

ಈ ವಿಚಾರವನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಇದನ್ನು ಪ್ರಸ್ತಾಪಿಸಲಾಗುವುದು. ಅಲ್ಲಿ ಕೂಲಂಕಷವಾಗಿ ಚರ್ಚಿಸಿದ ನಂತರ ಸರ್ಕಾರಕ್ಕೆ ವರದಿ ನೀಡಲಾಗುವುದು. ಜಿಲ್ಲೆಯ ಹಿತ ಕಾಯುವ ಮತ್ತು ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ಉದ್ದೇಶ ನನಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.