ADVERTISEMENT

ಸಮಗ್ರ ನೀರಾವರಿಗೆ ಆದ್ಯತೆ

ತಿಪಟೂರಿನ ಪ್ರಚಾರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ನುಡಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:01 IST
Last Updated 10 ಏಪ್ರಿಲ್ 2019, 17:01 IST

ತಿಪಟೂರು: ‘ತುಮಕೂರು ಜಿಲ್ಲೆಯ ನೀರಾವರಿ ವ್ಯವಸ್ಥೆಗೆ ನಾನು ಅಡ್ಡಗಾಲು ಹಾಕಿದ್ದೆ ಎಂದು ನನ್ನ ವಿರುದ್ಧ ಬಿಜೆಪಿಯವರು ಗಂಭೀರ ಆರೋಪ ಮಾಡುತ್ತಿದ್ದಾರೆ. ಆದರೆ ಇದೆಲ್ಲವೂ ಸುಳ್ಳು. ಈಗಲೂ ಜಿಲ್ಲೆಯ ಸಮಗ್ರ ನೀರಾವರಿ ಮತ್ತು ಕುಡಿವ ನೀರಿನ ವಿಚಾರವೇ ನನ್ನ ಆದ್ಯತೆ’ ಎಂದು ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರು ನುಡಿದರು.

ನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ ಮಂಗಳವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಹೇಮಾವತಿ ನಾಲೆ ಕಾಮಗಾರಿ ನಡೆಯುವಾಗ ಲೋಕೋಪಯೋಗಿ ಸಚಿವನಾಗಿದ್ದೆ. ಆಗ ಸುರಂಗ ಕುಸಿದು ಬಿದ್ದು ಆತಂಕ ಸೃಷ್ಟಿಸಿತ್ತು. ಸುರಂಗ ಮಾಡಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿತ್ತು. ಎಂಜಿನಿಯರ್‌ಗಳೂ ಅದನ್ನೇ ಹೇಳಿದ್ದರು. ಆ ಸಂದರ್ಭದಲ್ಲಿ ನಾನು, ಮುಖ್ಯ ಎಂಜಿನಿಯರ್ ಬಾಳೆಕುಂದ್ರಿ ಅವರಿಗೆ ಮನವರಿಗೆ ಮಾಡಿಕೊಟ್ಟೆ ಕಾಮಗಾರಿ ನಡೆಸಿದರು. ಜಿಲ್ಲೆಗೆ ನೀರು ಬಂದಿತು’ ಎಂದು ನೆನಪು ಮಾಡಿಕೊಂಡರು.

ADVERTISEMENT

‘ತುರುವೇಕೆರೆ ತಾಲ್ಲೂಕಿಗೆ ನೀರು ಹರಿದಾಗ ನಾನೇ ಉದ್ಘಾಟನೆಗೆ ಹೋಗಿದ್ದೆ. ಆದರೆ ಸುರಂಗ ಕಾಮಗಾರಿ ವಿಷಯದ ಕುರಿತು ಬಾಳೆಕುಂದ್ರಿ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಿ ರಾಜಕೀಯವಾಗಿ ನನ್ನ ಮುಗಿಸಲು ಸಂಚು ನಡೆದಿತ್ತು’ ಎಂದರು.

‘ಬಿಜೆಪಿ ತನ್ನ ಆಷಾಢಭೂತಿತನದ ಮೂಲಕ ದೇಶದ ಜನರನ್ನು ಮರುಳು ಮಾಡಲು ಹೊರಟಿದೆ’ ಎಂದು ಹೇಳಿದರು.

‘ನಾನು ರಾಜ್ಯದ ನೀರಾವರಿ ಸಚಿವನಾಗಿದ್ದ ವೇಳೆ ಪ್ರಧಾನಿ ಇಂದಿರಾ ಗಾಂಧಿ ನನ್ನನ್ನೇ ನೀರಾವರಿ ಸಮಿತಿಯೊಂದಕ್ಕೆ ಅಧ್ಯಕ್ಷನನ್ನಾಗಿ ಮಾಡಿದ್ದರು. ಆಗ ರಾಷ್ಟ್ರದಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಆದ್ಯತಾ ಪಟ್ಟಿ ರಚಿಸಲು ಸಮಿತಿ ರಚಿಸಲಾಗಿತ್ತು. ನದಿ ಜೋಡಣೆ ವಿಷಯ ಆಗಲೇ ಸಮಿತಿಯ ಮುಂದೆ ಬಂದಿತ್ತು. ನೀರಾವರಿ, ಕುಡಿವ ನೀರಿನ ಯೋಜನೆ, ಉದ್ಯಮಗಳ ಸ್ಥಾಪನೆ ವಿಷಯ ಮುಂಚೂಣಿಯಲ್ಲಿದ್ದವು’ ಎಂದರು.

‘ರಾಜ್ಯದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಸರ್ಕಾರ ಹಣ ಕೊಡದಿದ್ದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೆ. ನಂತರ ನಮ್ಮದೇ ಸರ್ಕಾರ ಬಂದಾಗ ಶೇ. 18ರ ಬಡ್ಡಿ ದರದಲ್ಲಿ ಸಾಲ ಮತ್ತು ಬಾಂಡ್‍ಗಳ ಮೂಲಕ ಹಣ ಹೊಂದಿಸಿ ಜಲಾಶಯ ಪೂರ್ಣಗೊಸಿದ್ದೆವು. ಹೀಗೆ ನೀರು ಮತ್ತು ನೀರಾವರಿಗೆ ಹೋರಾಡಿರುವ ನನ್ನ ಬದ್ಧತೆ ಬಗ್ಗೆ ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ’ ಎಂದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘1995ರಲ್ಲಿ ಅಂದಿನ ಕೇಂದ್ರ ಸರ್ಕಾರ ‘ಆಕ್ಷಿಲರೇಟರಿ ಇರಿಗೇಷನ್ ಬೆನಿಫಿಟ್ ಪ್ರಾಜೆಕ್ಟ್’ ಎಂಬ ಯೋಜನೆ ರೂಪಿಸಿತ್ತು. ಪ್ರತಿ ರಾಜ್ಯಗಳ ನೀರಾವರಿ ಯೋಜನೆಗಳಿಗೆ ವಾರ್ಷಿಕ ₹ 1 ಸಾವಿರ ಕೋಟಿ ಅನುದಾನ ನೀಡುವ ಯೋಜನೆ ಜಾರಿಗೊಳಿಸಿತ್ತು. ಕೇಂದ್ರದ ಆ ಅನುದಾನದಿಂದ ರಾಜ್ಯದ ನನೆಗುದಿಗೆ ಬಿದ್ದ ಯೋಜನೆಗಳನ್ನು ಮುಂದುವರಿಸಲು ಅನುಕೂಲವಿತ್ತು. ಆದರೆ ನರೇಂದ್ರ ಮೋದಿ ಪ್ರಧಾನಿ ಆದ ನಂತರ ಆ ಯೋಜನೆಯನ್ನೇ ಸ್ಥಗಿತಗೊಳಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ಅನುದಾನ ನಿಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

‘ಕರ್ನಾಟಕದಲ್ಲಿ ನನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಅನುದಾನ ಬೇಕು. ಕೇಂದ್ರದ ಅನುದಾನ ನಿಂತಿರುವುದರಿಂದ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕಷ್ಟವಾಗುತ್ತದೆ’ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ‘ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನರೇಂದ್ರ ಮೋದಿ ರಫೇಲ್‌ ಹಗರಣದಲ್ಲಿ ಸಾವಿರಾರು ಕೋಟಿ ಹಗರಣ ನಡೆಸಿದ್ದಾರೆ. ಈ ಬಗ್ಗೆ ಅವರು ಏಕೆ ಮಾತನಾಡುತ್ತಿಲ್ಲ. ಆಗರ್ಭ ಶ್ರೀಮಂತರಿಗೆ ನೆರವಾಗಿ ದೇಶವನ್ನು ಬಡತನದ ಕಡೆ ತಳ್ಳಿದ್ದಾರೆ’ ಎಂದು ದೂರಿದರು.

ಮುಖಂಡ ಸಿ.ಎಂ.‌ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು. ಸಚಿವ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮುಖಂಡರಾದ ಕೆ.ಷಡಕ್ಷರಿ, ಲೋಕೇಶ್ವರ, ಸುರೇಶ್‍ಬಾಬು, ಎಂ.ಟಿ. ಕೃಷ್ಣಪ್ಪ, ರಮೇಶ್‍ಬಾಬು, ಷಫಿ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.