ADVERTISEMENT

ಮಾಯವಾಗುತ್ತಿವೆ ಮಣ್ಣು, ಮರದ ಸಾಧನ

ಗ್ರಾಮೀಣರ ಬದುಕಲ್ಲಿ ಹಾಸುಹೊಕ್ಕಾದ ಪ್ಲಾಸ್ಟಿಕ್‌, ಸ್ಟೀಲ್‌ ವಸ್ತುಗಳು

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:12 IST
Last Updated 26 ಜುಲೈ 2025, 4:12 IST
ಕೊರಟಗೆರೆ ಸಂತೆಯಲ್ಲಿ ಅಪರೂಪಕ್ಕೆ ಮಾರಾಟಕ್ಕೆ ಇಟ್ಟಿದ್ದ ಕೃಷಿ ಪರಿಕರ
ಕೊರಟಗೆರೆ ಸಂತೆಯಲ್ಲಿ ಅಪರೂಪಕ್ಕೆ ಮಾರಾಟಕ್ಕೆ ಇಟ್ಟಿದ್ದ ಕೃಷಿ ಪರಿಕರ   

ಕೊರಟಗೆರೆ: ಒಂದು ಕಾಲದಲ್ಲಿ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮಣ್ಣು, ಮರದ ಸಾಧನಗಳು ನಿಧಾನವಾಗಿ ಇತಿಹಾಸದ ಪುಟ ಸೇರುತ್ತಿವೆ.

ಮಡಿಕೆ, ಹೊನ್ನಾರು, ಕುಂಟೆ, ಹಲಗು, ಚೆಕ್ಕೆ, ನೇಗಿಲು, ಅಕ್ಕಡಿ, ಬಾಳ್ಸಿ, ಕುಳ, ಗಾಡಿ ಅಚ್ಚು, ಗೂಟ, ಮುಳ್ಳಲುವೆ ಇವೆಲ್ಲವೂ ಗ್ರಾಮೀಣ ಬದುಕಿನಿಂದ ಸಂಪೂರ್ಣವಾಗಿ ಮರೆಯಾಗಿ, ಇತಿಹಾಸ ಸೇರಿವೆ.

ರೈತರು ಹೊಲ ಉಳುಮೆಗೆ ‘ಹೊನ್ನಾರು’, ನೀರು ಕುಡಿಯಲು ‘ಮಡಿಕೆ’, ಅಕ್ಕಿ ಬಡಿಸಲು ‘ಚೆಕ್ಕೆ’, ಭತ್ತ ಕುಟ್ಟಲು (ಅಕ್ಕಿ ಬೇರ್ಪಡಿಸಲು)‘ಕಡಿ’, ಗಂಜಿ, ಹಾಳು, ಮಜ್ಜಿಗೆ ಮೊಸರು ಇಡಲು ‘ನಿಲುವು’, ಮತ್ತು ಉಪ್ಪಿನಕಾಯಿಗೆ ‘ಜಾಡಿ’ ಮರಮುಟ್ಟುಗಳನ್ನು ಕೊರೆಯಲು ‘ಬೈರ್ಗೆ’ ಬಳಕೆಯಲ್ಲಿದ್ದವು.

ADVERTISEMENT

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯಂತ್ರಸಾಮರ್ಥ್ಯ ಹೆಚ್ಚಾಗಿದೆ. ಪ್ಲಾಸ್ಟಿಕ್, ಸ್ಟೀಲ್‌ ಪರಿಕರಗಳು ಹಾಸುಹೊಕ್ಕಾಗಿವೆ. ಮಡಿಕೆ ಬದಲಿಗೆ ತಂಬಿಗೆ, ಹೊನ್ನಾರು ಬದಲಿಗೆ ಮೋಟರ್ ಪಂಪ್‌, ಮಡಿಕೆ ಬದಲಿಗೆ ಪ್ಲಾಸ್ಟಿಕ್ ಡಬ್ಬಿ, ಹಲಗು ಬದಲಿಗೆ ಬೇರೆ ಬೇರೆ ಸಾಧನಗಳು ಬಳಕೆಯಲ್ಲಿವೆ.

ಇಂದಿನ ಪೀಳಿಗೆಗೆ ನೊಗ, ಅಣಸು, ಕುಡ್ಲು, ಗಾಡಿ ಅಚ್ಚು (ಗಾಡಿ ಚಕ್ರದ ಭಾಗ), ಕಣ್ಣಿ, ಪಟ್ಟಕಣ್ಣಿ, ಕಡಾಣಿ, ಕ್ವಾಲ್ಡಿ ಪದಗಳ ಅರ್ಥವೇ ಗೊತ್ತಿಲ್ಲ. ಮನೆಗಳಲ್ಲಿ ಈ ಪರಿಕರಗಳು ಒಣಗಿದ ಮರದ ಬೊಂಬೆಗಳಾಗಿ ಉಳಿದಿವೆ. ಮ್ಯೂಸಿಯಮ್‌ ಅಥವಾ ಜಾತ್ರೆಯ ಶೋ ಕೌಂಟರ್‌, ಸಂತೆಗಳಲ್ಲಿ ಅಪರೂಪಕ್ಕೆ ಕಾಣಿಸುತ್ತವೆ.

ಬಾಳ್ಸಿಯಲ್ಲಿ ನೇಗಿಲು ಕೆತ್ತನೆ ಸಂಭ್ರಮ, ಮೇಣಿಯಲ್ಲಿ ನೇಗಿಲ ಹೂಡುವ ನೆನಪು, ಕುಡ್ಲಿನಲ್ಲಿ ಬೆಳೆಗಳನ್ನು ಕಟಾವು ಮಾಡುವುದು. ಮೊರ, ಪುಟಿಗೆಗಳಲ್ಲಿ ವಿಂಗಡಿಸುವ ಕಡಿ, ಕಾಳು ಇವುಗಳೆಲ್ಲ ಹಳ್ಳಿ ಮನಸ್ಸಿನ ಋತುಚಕ್ರವಾಗಿತ್ತು. ಇಂದು ಇವನ್ನೆಲ್ಲ ಕೇವಲ ‘ಹಿಂದೆ’ ಬಳಸಲಾಗುತ್ತಿತ್ತು ಎನಿಸುವ ವಸ್ತುಗಳಾಗಿ ನೋಡಲಾಗುತ್ತಿದೆ.

ಮನೆಯ ಬುಡಕುಟೀರದಿಂದ ಆರಂಭಿಸಿ ಶಾಲಾ ಪಠ್ಯ ಪದ್ಧತಿಯಲ್ಲಿ ಈ ಪರಿಕರಗಳ ಪರಿಚಯವಾಗಬೇಕು. ಹಳ್ಳಿಗಳಲ್ಲಿ ಹಳೆ ವಸ್ತುಗಳ ಪ್ರದರ್ಶನ, ಸಂಗ್ರಹಾಲಯ ಹಾಗೂ ಹಿರಿಯರ ನೆನಪುಗಳ ಬರಹಗಳ ಮೂಲಕ ಅವುಗಳನ್ನು ಸ್ಮರಿಸುವ ಪ್ರಯತ್ನ ಮಾಡಬಹುದು.

ಮರದಿಂದ ಮಾಡಿದ್ದ ಹಳೆ ಮಾದರಿ ಕೃಷಿ ಪರಿಕರ ಮಾರಾಟ ಮಾಡುತ್ತಿದ್ದ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.