ADVERTISEMENT

ಕೇರ್ ಸೆಂಟರ್‌ಗೆ ಸೋಂಕಿತರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:04 IST
Last Updated 25 ಏಪ್ರಿಲ್ 2021, 5:04 IST

ತುಮಕೂರು: ಹೋಂ ಐಸೋಲೇಷನ್, ಹೋಂ ಕ್ವಾರಂಟೈನ್‌ನಲ್ಲಿ ಇರುವ ಕೊರೊನಾ ಸೋಂಕಿತರನ್ನು ಕೂಡಲೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು. ಸೋಂಕಿನ ಮೂಲ ಪತ್ತೆ ಹಚ್ಚಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್-19 ತಡೆಗಟ್ಟುವುದು, ನಿರ್ವಹಣೆ ಕುರಿತಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕಂದಾಯ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಗಮನ ಹರಿಸಬೇಕು. ಹೋಂ ಕ್ವಾರಂಟೈನ್‍ನಲ್ಲಿ ಇರುವವರು ಎಲ್ಲೆಂದರಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಲ್ಲದೆ, ಮನೆಗಳಲ್ಲಿ ಪ್ರತ್ಯೇಕವಾಗಿ ಇರಲು ಸೌಲಭ್ಯಗಳು ಇಲ್ಲದಿರಬಹುದು. ಹಾಗಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಸೋಂಕಿನ ಲಕ್ಷಣ ಇಲ್ಲದವರು, ಆಮ್ಲಜನಕದ ಅವಶ್ಯಕತೆ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಕ್ವಾರಂಟೈನ್‍ನಲ್ಲಿದ್ದ ಸೋಂಕಿತರ ಮನೆಯವರನ್ನು ಕಡ್ಡಾಯವಾಗಿ ರ‍್ಯಾಪಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ನಿರ್ದೇಶಿಸಿದರು.

ADVERTISEMENT

ಸೋಂಕಿನ ಮೂಲ ಪತ್ತೆ ಹಚ್ಚಬೇಕು. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಆಶಾ ಕಾರ್ಯಕರ್ತೆಯರು ಕೆಲಸ ನಿರ್ವಹಿಸಲು ನಿರಾಕರಿಸಿದರೆ ಕ್ರಮ ಕೈಗೊಳ್ಳುವಂತೆ ಹೇಳಿದರು.

‘ರೆಮಿಡಿಸಿವಿರ್, ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಕೆ ಮಾಡಿ, ಕೊರತೆಯಾಗದಂತೆ ನಿರ್ವಹಿಸಬೇಕು. ಖಾಸಗಿ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ ಭೇಟಿ ನೀಡಿ ರೆಮಿಡಿಸಿವಿರ್ ಹಾಗೂ ಆಮ್ಲಜನಕ ಬಳಕೆ ಕುರಿತು ಪರಿಶೀಲನೆ ಮಾಡಬೇಕು. ಈ ಬಗ್ಗೆ ಪ್ರತಿನಿತ್ಯ ವರದಿ ಸಂಗ್ರಹಿಸಿ ನನಗೆ, ಜಿಲ್ಲಾಧಿಕಾರಿಗೆ ನೀಡಬೇಕು. ನಿಗದಿಗಿಂತ ಹೆಚ್ಚಿನ ಬೆಲೆಗೆ ರೆಮಿಡಿಸಿವಿರ್ ಮಾರಾಟವಾಗದಂತೆ ಕ್ರಮ ವಹಿಸಬೇಕು’ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಔಷಧನಿಯಂತ್ರಕರಾದ ಮಮತಾ ಅವರಿಗೆ ಸೂಚಿಸಿದರು.

ಪ್ರತಿನಿತ್ಯ 5ರಿಂದ 6 ಸಾವಿರ ಕೋವಿಡ್ ಪರೀಕ್ಷೆಗಳಾಗಬೇಕು. ಅಂದಿನ ವರದಿ ಅಂದೇ ಸಿಗುವಂತಾಗಬೇಕು. ಸೋಂಕು ಹರಡುವ ಸಂಪರ್ಕ ಕಡಿತಕ್ಕೆ ಅಧಿಕಾರಿಗಳು ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಗ್ರಾಮಕ್ಕೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಬಾರದು. ಹಳ್ಳಿಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.

ತಿಪಟೂರಿನಲ್ಲಿ ಪ್ರಯೋಗಾಲಯ ಇದ್ದು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಭಾಗದ ಕೋವಿಡ್ ಪರೀಕ್ಷೆಗಳನ್ನು ಮಾಡಿಸಬೇಕು. ಶಿರಾ, ತಿಪಟೂರು ಆಸ್ಪತ್ರೆಗಳಲ್ಲಿ ಕನಿಷ್ಠ 100 ಆಮ್ಲಜನಕ ಸಂಪರ್ಕವಿರುವ ಹಾಸಿಗೆ ನಿರ್ಮಾಣ ಮಾಡಬೇಕು. ಇದರಿಂದ ಸೋಂಕಿತರಿಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ಪ್ರತಿ ತಾಲ್ಲೂಕಿನಲ್ಲೂ ಐಸಿಯು, ಆಮ್ಲಜನಕ ಸಂಪರ್ಕವಿರುವ ಹಾಸಿಗೆ, ವೆಂಟಿಲೇಟರ್ ಸೇರಿದಂತೆ ಸೋಂಕಿತರ ಚಿಕಿತ್ಸೆಗೆ ಬೇಕಾದ ಸೌಲಭ್ಯ ಒದಗಿಸಲಾಗಿದೆ. ಆಯಾ ತಾಲ್ಲೂಕಿನಲ್ಲಿ ಚಿಕಿತ್ಸೆ ನೀಡಿ ಗಂಭೀರತೆ ಇದ್ದರೆ ಮಾತ್ರ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವಂತೆ ವೈದ್ಯರಿಗೆ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.