ADVERTISEMENT

ಡಬಲ್‌ ಎಂಜಿನ್‌ ಸರ್ಕಾರದಿಂದ ತ್ರಿಬಲ್‌ ದೋಖಾ: ರಾಯಸಂದ್ರ ರವಿಕುಮಾರ್‌

‘ಕೇವಲ ಪದಪುಂಜಗಳಲ್ಲಿ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:42 IST
Last Updated 11 ಮಾರ್ಚ್ 2023, 15:42 IST
ರಾಯಸಂದ್ರ ರವಿಕುಮಾರ್‌
ರಾಯಸಂದ್ರ ರವಿಕುಮಾರ್‌   

ತುಮಕೂರು: ‘ಡಬಲ್ ಎಂಜಿನ್ ಸರ್ಕಾರವು ಜನರಿಗೆ ತ್ರಿಬಲ್ ದೋಖಾ ಮಾಡಿದೆ. ಪೊಳ್ಳು ಭರವಸೆ ಕೊಡುತ್ತಾ, ಸಾರ್ವಜನಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಯಸಂದ್ರ ರವಿಕುಮಾರ್‌ ಇಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಗಳು ಹೆಸರಿಗೆ ಮಾತ್ರ ಇವೆ, ಪದಪುಂಜಗಳಲ್ಲಿ ಸರ್ಕಾರ ನಡೆಯುತ್ತಿದೆ. ರೈತರು ಅಗತ್ಯ ಬೆಂಬಲ ಬೆಲೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಜನರ ದುಡ್ಡಲ್ಲಿ ಫಲಾನುಭವಿಗಳ ಸಮಾವೇಶ ಎಂದು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ತೆಂಗು ಬೆಳೆಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ. ಸೂಕ್ತ ಭದ್ರತೆ ಇಲ್ಲದೆ ಆತಂಕದಲ್ಲಿದ್ದು, ಆತ್ಮಹತ್ಯೆಯತ್ತ ದೃಷ್ಟಿ ನೆಡುತ್ತಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ರೈತರ ಪರ ಧ್ವನಿ ಎತ್ತಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಆಮದು ಸುಂಕು ಕಡಿಮೆ ಮಾಡಿ ವಿದೇಶಗಳಿಂದ ಎಣ್ಣೆ ಉತ್ಪನ್ನಗಳನ್ನು ತರಿಸಿ ಕೊಳ್ಳುತ್ತಿದ್ದಾರೆ. ಇದರಿಂದ ಕೊಬ್ಬರಿಗೆ ಸೂಕ್ತ ಬೆಲೆ ಸಿಗದಂತಾಗಿದೆ ಎಂದರು.

ADVERTISEMENT

ಕನಿಷ್ಠ ₹20 ಸಾವಿರ ನೀಡಿ, ಕೊಬ್ಬರಿ ಖರೀದಿ ಮಾಡಬೇಕು. ಕೊಬ್ಬರಿ ಮಾರಿದ ರೈತರಿಗೆ ಹಲವು ತಿಂಗಳು ಕಳೆದರೂ ಹಣ ಪಾವತಿಯಾಗುತ್ತಿಲ್ಲ. ಕೊಬ್ಬರಿ ಖರೀದಿ ಮಾಡಿದ 72 ಗಂಟೆಗಳ ಒಳಗೆ ಎಲ್ಲ ರೈತರಿಗೂ ಹಣ ಸಂದಾಯವಾಗಬೇಕು ಎಂದು ಒತ್ತಾಯಿಸಿದರು.

ಕಳೆದ ಬಾರಿ ತಿಪಟೂರಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಲ್ಲಿಯೇ ಅಂತರರಾಷ್ಟ್ರೀಯ ಗುಣಮಟ್ಟದ ಕೊಬ್ಬರಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಅಮಿತ್‌ ಶಾ ಹೇಳಿದ್ದೇನೆ? ಮಾಡಿದ್ದೇನೆ? ಎಂದು ಪ್ರಶ್ನಿಸಿದರು.

ಮುಖಂಡರಾದ ಕುಚ್ಚಂಗಿ ರಮೇಶ್, ಚಕ್ರವರ್ತಿ ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.