ತುಮಕೂರು: ನಗರದ ರಸ್ತೆಗಳು ತೀರಾ ಹದಗೆಟ್ಟಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಬಿಗಡಾಯಿಸುತ್ತಿದೆ. ಹೃದಯ ಭಾಗದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದರೆ ಇತರೆ ಬಡಾವಣೆಗಳಲ್ಲಿ ಜನರು ಓಡಾಡಲು ಪ್ರಯಾಸ ಪಡಬೇಕಿದೆ.
ನೂರಾರು ವಾಹನಗಳು ಸಂಚರಿಸುವ, ಸಾವಿರಾರು ಜನರು ಓಡಾಡುವ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿವೆ. ರಸ್ತೆಗಾಗಿ ಪ್ರತಿ ವರ್ಷ ಮಹಾನಗರ ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಮಂಡಿಪೇಟೆ, ಕುಣಿಗಲ್ ರಸ್ತೆ, ಬನಶಂಕರಿ, ಶಾಂತಿನಗರ, ಅಮರಜ್ಯೋತಿ ನಗರ, ಬಿ.ಎಚ್.ರಸ್ತೆ, ಬೆಳಗುಂಬ ರಸ್ತೆ ಸೇರಿ ಹಲವು ರಸ್ತೆಗಳಲ್ಲಿನ ಗುಂಡಿಗಳು ಬಲಿಗಾಗಿ ಕಾಯುತ್ತಿವೆ.
ಪ್ರಮುಖ ವಾಣಿಜ್ಯ ಸ್ಥಳ ಮಂಡಿಪೇಟೆಯ ಮುಖ್ಯರಸ್ತೆ ಅವ್ಯವಸ್ಥೆಯ ಕೂಪವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೊದಲಿಗೆ ರಸ್ತೆ ಅಗೆದಿದ್ದರು. ಅಂದಿನಿಂದ ಇಂದಿನ ವರೆಗೆ ಒಂದಲ್ಲೊಂದು ತೊಂದರೆಗಳು ಆಗುತ್ತಲೇ ಇವೆ. ಕಾಮಗಾರಿ ಮುಗಿದ ಕೆಲವೇ ದಿನಗಳಿಗೆ 2022ರ ಫೆಬ್ರುವರಿ ಮತ್ತು ಆಗಸ್ಟ್‌ನಲ್ಲಿ ರಸ್ತೆ ಮಧ್ಯದಲ್ಲಿ ಕುಸಿದಿತ್ತು. ಕಾಮಗಾರಿ ಮುಗಿದು ವರ್ಷ ಕಳೆಯುವ ಮುನ್ನವೇ 2 ಬಾರಿ ಕುಸಿತ ಕಂಡಿತ್ತು. ಅದಕ್ಕೆ ತೇಪೆ ಹಚ್ಚಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
2023ರ ಜನವರಿಯಲ್ಲಿ ಮಂಡಿಪೇಟೆ ರಸ್ತೆಯಲ್ಲಿ ₹20 ಲಕ್ಷ ವೆಚ್ಚದಲ್ಲಿ ಯುಜಿಡಿ ಅಳವಡಿಸಲು ಯೋಜನೆ ರೂಪಿಸಲಾಯಿತು. ಕಾಮಗಾರಿಗಾಗಿ ಮತ್ತೊಮ್ಮೆ ರಸ್ತೆ ಅಗೆದರು. ಅರ್ಧ ಕಾಮಗಾರಿ ಮಾಡಿ ಕೆಲಸ ನಿಲ್ಲಿಸಿದ್ದರು. ಒಂದು ವರ್ಷ ಕಳೆದ ನಂತರ 2024ರ ಜನವರಿಯಲ್ಲಿ ಪುನಃ ರಸ್ತೆ ತೋಡಿದರು. ಸುಮಾರು 450 ಮೀಟರ್ ಉದ್ದದ ರಸ್ತೆಯನ್ನು ಎರಡು ಹಂತದಲ್ಲಿ ರಿಪೇರಿ ಮಾಡಿದರು. ಇಲ್ಲಿಯ ತನಕ ಸರಿಪಡಿಸಲು ಆಗಿಲ್ಲ. ಜೋರು ಮಳೆ ಬಂದರೆ ಸರಾಗವಾಗಿ ನೀರು ಹರಿದುಹೋಗಲು ಸಾಧ್ಯವಾಗದೆ ಅಂಗಡಿಗಳಿಗೆ ನುಗ್ಗುತ್ತಿದೆ.
‘ಮಳೆ ಬಂದ ಪ್ರತಿ ಸಾರಿ ರಸ್ತೆಯ ಗುಂಡಿಗಳಲ್ಲಿ ಮೊಳಕಾಲುದ್ದ ನೀರು ನಿಲ್ಲುತ್ತದೆ. ವಾಹನಗಳ ಓಡಾಟವೂ ದಿನೇ ದಿನೇ ಹೆಚ್ಚಾಗುತ್ತಿದೆ. ಪಾಲಿಕೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಎರಡೆರಡು ಬಿಲ್ ಮಾಡಿಕೊಂಡರು. ಇಲ್ಲಿನ ಜನರ ಗೋಳು ಕೇಳುವವರಿಲ್ಲ. ಇದೀಗ ಮತ್ತೆ ಹೇಗೆ ರಸ್ತೆ ಅಗೆಯಬೇಕು, ಯಾವ ರೀತಿಯಲ್ಲಿ ಅನುದಾನ ಪಡೆಯಬೇಕು ಎಂಬ ಯೋಚನೆಯಲ್ಲಿ ಇದ್ದಂತೆ ಕಾಣುತ್ತಿದೆ’ ಎಂದು ಮಂಡಿಪೇಟೆಯ ಶಿವಾನಂದ ಅಸಮಾಧಾನ ವ್ಯಕ್ತಪಡಿಸಿದರು.
ಕೆಸರುಗದ್ದೆ: ರಾಮಕೃಷ್ಣ ನಗರದ ಸಾಯಿಬಾಬಾ ದೇಗುಲದ ಹಿಂಭಾಗದಲ್ಲಿರುವ, ಅಮರಜ್ಯೋತಿ ನಗರದ ಮುಖ್ಯರಸ್ತೆ ಅಗೆದು ಒಂದು ವರ್ಷ ಕಳೆದಿದ್ದು, ಈವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ. ಒಂದು ಸಣ್ಣ ಮಳೆ ಸುರಿದರೂ ಕೆಸರುಗದ್ದೆಯಂತಾಗುತ್ತದೆ. ವಾಹನ ಸವಾರರು ಕೆಳಗೆ ಜಾರಿ ಬೀಳುವ ಭಯದಲ್ಲೇ ಮುಂದೆ ಸಾಗುತ್ತಾರೆ. ಇದುವರೆಗೆ ಹಲವರು ಬಿದ್ದ ಸೊಂಟ ಮುರಿದುಕೊಂಡಿದ್ದಾರೆ.
ರಸ್ತೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟವೂ ಸಾಧ್ಯವಾಗುತ್ತಿಲ್ಲ. ಇಲ್ಲಿನ ನಿವಾಸಿಗಳು ಪಾಲಿಕೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಳ್ಳುತ್ತಿಲ್ಲ. ಇದೇ ರಸ್ತೆಯಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ತಲುಪಲು ಜನ ಹೈರಾಣಾಗುತ್ತಿದ್ದಾರೆ. ನೀರು ನಿಂತಾಗ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ರಸ್ತೆ ದಾಟುತ್ತಿದ್ದ ದೃಶ್ಯಗಳು ಕಂಡು ಬಂದವು.
‘ಬೇಸಿಗೆ ಸಮಯದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಗುತ್ತಿಗೆದಾರರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಅನಂತ್‌ಕುಮಾರ್ ಅಳಲು ತೋಡಿಕೊಂಡರು.
15ನೇ ಹಣಕಾಸು ಆಯೋಗದಿಂದ ಎರಡು ಆರ್ಥಿಕ ವರ್ಷಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ಮೀಸಲಿಟ್ಟಿದ್ದು ಈವರೆಗೆ ಒಂದು ರೂಪಾಯಿ ಸಹ ಬಿಡುಗಡೆಯಾಗಿಲ್ಲ. 2023–24ರಲ್ಲಿ ₹5 ಕೋಟಿ 2024–25ರಲ್ಲಿ ₹5 ಕೋಟಿ ರಸ್ತೆ ಅಭಿವೃದ್ಧಿಗೆ ತೆಗೆದಿಡಲಾಗಿತ್ತು. ಇಲ್ಲಿಯ ತನಕ ಸರ್ಕಾರದಿಂದ ಯಾವುದೇ ಹಣ ಪಾಲಿಕೆಯ ಖಾತೆಗೆ ಬಂದಿಲ್ಲ. ರಸ್ತೆಗಳ ಗುಂಡಿ ಮುಚ್ಚಲು ಮಹಾನಗರ ಪಾಲಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೂ ಗುಂಡಿಗಳಿಗೆ ಕನಿಷ್ಠ ಮಣ್ಣು ಹಾಕಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ. 2022–23 ಮತ್ತು 2023–24ನೇ ಸಾಲಿನಲ್ಲಿ ರಸ್ತೆ ಗುಂಡಿಗಳಿಗಾಗಿ ₹80 ಲಕ್ಷ ವ್ಯಯಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ₹35 ಲಕ್ಷ ವೆಚ್ಚ ಮಾಡಲಾಗುತ್ತಿದೆ.
‘ನಗರದ ವಿವಿಧೆಡೆ ರಸ್ತೆಗೆ ಉಬ್ಬುಗಳಿಲ್ಲ ಹಲವು ಕಡೆ ಉಬ್ಬುಗಳು ಬಣ್ಣ ಕಂಡಿಲ್ಲ. ರೇಡಿಯಂ ದೀಪ ಅಳವಡಿಸಿಲ್ಲ. ಕನಿಷ್ಠ ಸೂಚನಾ ಫಲಕ ಹಾಕಿಲ್ಲ. ಸ್ಮಾರ್ಟ್ ಸಿಟಿ ಮಹಾನಗರ ಪಾಲಿಕೆಯಿಂದ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಿದ್ದಾರೆ’ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಕಳೆದ ನಾಲ್ಕು ತಿಂಗಳಿನಿಂದ ನಗರಕ್ಕೆ ಪ್ರವೇಶ ಪಡೆಯಲು ಎಲ್ಲ ವಾಹನಗಳು ಬಳಸುತ್ತಿರುವ ಬೆಳಗುಂಬ ರಸ್ತೆ ಹಲವು ಕಡೆಗಳಲ್ಲಿ ಕುಸಿದಿದೆ. ಗುಂಡಿ ಬಿದ್ದ ಕಡೆ ಬ್ಯಾರಿಕೇಡ್ ಹಾಕಲಾಗಿದೆ.
ಮಂಡಿಪೇಟೆ ರಸ್ತೆಯಲ್ಲಿ ಸೂಕ್ತ ಚರಂಡಿ ಇಲ್ಲ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲಿ ನಿಲ್ಲುತ್ತಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಮಹಾನಗರ ಪಾಲಿಕೆಯ ಯಾರೊಬ್ಬರೂ ಇತ್ತ ಬಂದು ಪರಿಶೀಲನೆ ನಡೆಸಿ ಅಭಿವೃದ್ಧಿಯ ಮಾತು ಆಡುತ್ತಿಲ್ಲ. ಪ್ರತಿ ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತಿವೆ.ಅಮ್ಜದ್ ಮಂಡಿಪೇಟೆ
ಹಂಪ್ಸ್ ಇಲ್ಲ ನಗರದ ಪ್ರಮುಖ ರಸ್ತೆಗಳಿಗೆ ಹಂಪ್ಸ್ ಹಾಕಿಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೃತ್ತಗಳಲ್ಲಿ ಅಡ್ಡ ರಸ್ತೆಗಳಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಮುಖಾಮುಖಿಯಾಗುತ್ತಿವೆ. ವಾರ್ಡ್ ಸದಸ್ಯರು ಪಾಲಿಕೆಯ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಓಂಕಾರಮೂರ್ತಿ ಅಧ್ಯಕ್ಷ ಆಟೊ ನಿಲ್ದಾಣ
ಈ ಹಿಂದೆ ಕುಣಿಗಲ್ ರಸ್ತೆಯಲ್ಲಿ ಬರೀ ಗುಂಡಿಗಳಿದ್ದವು. ಪಾಲಿಕೆಯಿಂದ ರಸ್ತೆ ಅಭಿವೃದ್ಧಿ ಪಡಿಸಲಾಯಿತು. ಆದರೆ ಕೆಲವೇ ದಿನಗಳಿಗೆ ಮತ್ತೆ ಹಳೆಯ ಮಾದರಿಗೆ ಬಂದಿದೆ. ರೈಲ್ವೆ ಕೆಳ ಸೇತುವೆ ಬಳಿ ಪೂರ್ತಿಯಾಗಿ ಗುಂಡಿಗಳಿಂದ ತುಂಬಿಕೊಂಡಿದೆ. ಕನಿಷ್ಠ ಮಣ್ಣು ಡಾಂಬಾರು ಹಾಕಿ ಮುಚ್ಚುವ ಕೆಲಸವಾಗಿಲ್ಲ.ರಾಮಚಂದ್ರ ಆಟೊ ಚಾಲಕ
ಅಮರಜ್ಯೋತಿ ನಗರದ ಮುಖ್ಯರಸ್ತೆಯಲ್ಲಿ ಮಳೆ ಬಂದರೆ ಓಡಾಟವೇ ಕಷ್ಟವಾಗುತ್ತಿದೆ. ಕೆಸರು ಗದ್ದೆಯಂತೆ ನಿರ್ಮಾಣವಾಗುತ್ತದೆ. ರಸ್ತೆ ಅಗೆದು ಹಾಗೆ ಬಿಟ್ಟಿದ್ದರ ಪರಿಣಾಮ ಹೆಚ್ಚಿನ ಸಮಸ್ಯೆಯಾಗುತ್ತಿದೆ.ಜಯರಾಮಯ್ಯ ಆಟೊ ಚಾಲಕ
ನಿಮ್ಮ ಭಾಗದಲ್ಲೂ ರಸ್ತೆ ಹಾಳಾಗಿದ್ದರೆ ಚಿತ್ರ ಪುಟ್ಟ ವಿವರ ಕಳುಹಿಸಿಕೊಡಿ. ಅಂತಹ ಚಿತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಮೊ: 9448470165
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.