ಕುಣಿಗಲ್: ಅಡವಿಟ್ಟ ಚಿನ್ನಾಭರಣಗಳನ್ನು ಮಾಹಿತಿ ನೀಡದೆ ಹಣಕಾಸು ಸಂಸ್ಥೆಯೊಂದು ಹರಾಜು ಮಾಡಿದೆ ಎಂದು ಆರೋಪಿಸಿದ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಮಂಗಳವಾರ ಹಣಕಾಸು ಸಂಸ್ಥೆ ಮುಂದೆ ಪ್ರತಿಭಟನೆ ನಡಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮೋಹನ್ ಕುಮಾರ್, ಮನೆ ನಿರ್ಮಾಣಕ್ಕೆ ಅಗತ್ಯವಾಗಿದ್ದ ಹಣಕ್ಕಾಗಿ 108 ಗ್ರಾಂ ಚಿನ್ನದ ಆಭರಣಗಳನ್ನು ಸ್ಥಳೀಯ ಸಂಸ್ಥೆಯಲ್ಲಿ ಅಡವಿಟ್ಟು ₹4.90 ಲಕ್ಷ ಸಾಲ ಪಡೆದಿದ್ದರು. ಈಚೇಗೆ ಬಡ್ಡಿ ಪಾವತಿಸುವಂತೆ ಸೂಚನೆ ನೀಡಿದ್ದು, ಮಾರ್ಚ್ 20ರಂದು ಬಡ್ಡಿ ಪಾವತಿಗೆ ಕಚೇರಿಗೆ ಹೋದಾಗ, ಚಿನ್ನಾಭರಣಗಳನ್ನು ಹರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನೋಟಿಸ್ ನೀಡದೆ ಹರಾಜು ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಪ್ರಯೋಜನವಾಗದ ಕಾರಣ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಧನರಾಜು, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಗೋಲ್ಡ್ ಲೋನ್ ನೀಡುವ ಸಂಸ್ಥೆಗಳು ಮತ್ತು ಕೆಲ ದಲ್ಲಾಳಿಗಳು ಹರಾಜು ಪ್ರಕ್ರಿಯೆ ನೋಟಿಸ್ ನೀಡುವ ದಾಖಲೆಗಳನ್ನು ಸೃಷ್ಟಿಸಿ ಒಡವೆಗಳನ್ನು ಹರಾಜು ಮಾಡಿಕೊಂಡು ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು.
ಹರಾಜು ಪ್ರಕ್ರಿಯೆಗಳನ್ನು ಪಾರದರ್ಶಕ ನೀತಿಯಲ್ಲಿ ನಡೆಸದೆ ಆನ್‌ಲೈನ್ ಮೂಲಕ ನಡೆಸುತ್ತಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾ ಅಧ್ಯಕ್ಷ ಎಸ್.ಟಿ. ರಾಜು, ಜಿ.ಪರಮೇಶ್ವರ, ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ರಂಗನಾಥ್, ರಘು, ಮಾರತಿ, ರಾಮಾಚಾರಿ, ಪ್ರಭು, ಉಮಾಶಂಕರ್ ಹಟ್ಟಿರಂಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.