ADVERTISEMENT

ತುಮಕೂರು: ವ್ಯಸನ ಮುಕ್ತರನ್ನಾಗಿಸಲು ಜಾಗೃತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:19 IST
Last Updated 2 ಆಗಸ್ಟ್ 2025, 5:19 IST
ತುಮಕೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದ ಕಲಾವಿದರು
ತುಮಕೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದ ಕಲಾವಿದರು   

ತುಮಕೂರು: ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಶುಕ್ರವಾರ ವ್ಯಸನಮುಕ್ತರಾಗುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ವಾರ್ತಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.

ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಸಾಕ್ಷಿಯಾದರು. ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಲಾ ತಂಡ ಪ್ರದರ್ಶಿಸಿದ ಬೀದಿ ನಾಟಕ ನೆರೆದಿದ್ದವರಲ್ಲಿ ಜಾಗೃತಿ ಮೂಡಿಸಿತು.

ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮ, ಮಾರಣಾಂತಿಕ ರೋಗಕ್ಕೆ ತುತ್ತಾಗುವುದು, ಅಪರಾಧ ಕೃತ್ಯಗಳಲ್ಲಿ ಭಾಗಿ, ಕುಟುಂಬಕ್ಕಾಗುವ ಹಾನಿ, ಅವಮಾನ ಮೊದಲಾದ ಸಮಸ್ಯೆಗಳ ಬಗ್ಗೆ ಕಲಾವಿದರು ಬೆಳಕು ಚೆಲ್ಲಿದರು. ವಿದ್ಯೋದಯ ಕಾನೂನು ಕಾಲೇಜು ವಿದ್ಯಾರ್ಥಿಗಳಾದ ಕೀರ್ತನ, ಕೆ.ಎಸ್.ಸ್ಮಿತಾ, ಮೇಘಶ್ರೀ, ರಕ್ಷಿತಾ, ಭೂಮಿಕಾ, ದರ್ಶನ್, ಸಿದ್ದೇಶ್, ಲಕ್ಷಿತಾ ರಾಣಿ, ಅಥ್ಫಾ ಕಲಾ ತಂಡದಲ್ಲಿ ಇದ್ದರು.

ADVERTISEMENT

ವಾರ್ತಾ ಇಲಾಖೆ ಕಲಾವಿದರಾದ ಡಿ.ಸಿ.ಕುಮಾರ್, ಕಾಂತರಾಜು ಅವರು ಯಮನ ವೇಷ ಧರಿಸಿ ‘ಮಾದಕ ದ್ರವ್ಯ ಸೇವೆನೆಯಿಂದ ಸಾವು ಖಚಿತ’ ಎಂಬ ಸಂದೇಶ ಸಾರಿದರು. ಬೃಹದಾಕಾರದ ಮದ್ಯದ ಬಾಟಲಿ, ಸಿಗರೇಟ್ ಮಾದರಿ ಪ್ರದರ್ಶಿಸಿದರು. ಮಾದಕ ವಸ್ತು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಅಚರ್ಡ್ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆದವು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ‘ಆಧುನಿಕ ಜಗತ್ತಿನಲ್ಲಿ ಮಾದಕ ವಸ್ತು ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೋಹಕ ಮಾಯಾ ಜಾಲಕ್ಕೆ ಒಳಗಾದ ಅರ್ಧದಷ್ಟು ಜನರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ‘ಮದ್ಯ, ಮಾದಕ ವಸ್ತುಗಳಿಗೆ ಗುಲಾಮರಾದರೆ ನಮ್ಮನ್ನು ಅಣು–ಅಣುವಾಗಿ ಕೊಲ್ಲುತ್ತದೆ. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ಮನೋ ವೈದ್ಯ ಲೋಕೇಶ್‌ ಬಾಬು, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಮದ್ಯ, ಮಾದಕ ವ್ಯಸನಿಗಳಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಹಿಮಂತರಾಜು, ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜಶೇಖರ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಬಾಲಗುರುಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ವಾರ್ತಾ ಸಹಾಯಕಿ ಆರ್.ರೂಪಕಲಾ ಇತರರು ಉಪಸ್ಥಿತರಿದ್ದರು.

ಯಮನ ವೇಷ ಧರಿಸಿ ಗಮನ ಸೆಳೆದ ಕಲಾವಿದರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.