ತುಮಕೂರಿನಲ್ಲಿ ಶುಕ್ರವಾರ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಕುರಿತು ತಾಂತ್ರಿಕ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಜಿ.ಪಂ ಸಿಇಒ ಜಿ.ಪ್ರಭು, ಬೆಂಗಳೂರು ಕೃಷಿ ವಿ.ವಿ ವಿಶ್ರಾಂತ ಕುಲಪತಿ ನಾರಾಯಣಗೌಡ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ವಿಶ್ವನಾಥ್ ಉಪಸ್ಥಿತರಿದ್ದರು.
ತುಮಕೂರು: ಜಿಲ್ಲೆಯಿಂದ ಸುಮಾರು 136 ದೇಶಗಳಿಗೆ ₹9 ಸಾವಿರ ಕೋಟಿ ಮೌಲ್ಯದ ತೋಟಗಾರಿಕೆ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ನಗರದಲ್ಲಿ ಶುಕ್ರವಾರ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್), ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಕುರಿತು ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರಫ್ತಿಗೆ ಯೋಗ್ಯವಾದ ಹಲವು ಬೆಳೆ ಬೆಳೆಯಲಾಗುತ್ತಿದೆ. ಯುವ ರೈತರು ಇದರ ಪ್ರಯೋಜನ ಪಡೆದು ತೆಂಗು, ದಾಳಿಂಬೆ, ಮಾವು, ಹುಣಸೆ ಮುಂತಾದ ಬೆಳೆಗಳ ಉತ್ಪನ್ನ ರಫ್ತು ಮಾಡಬಹುದು. ರೈತರು ಉತ್ಪನ್ನದಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಸ್ಥಿರ ಆದಾಯ ಗಳಿಸಬಹುದು ಎಂದು ಸಲಹೆ ಮಾಡಿದರು.
ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್, ‘ಬೆಳೆಗಳ ಮೌಲ್ಯವರ್ಧನೆ, ಸಂಸ್ಕರಣೆಗೆ ಪಿಎಂಎಫ್‌ಎಂಇ ಯೋಜನೆಯಡಿ ₹15 ಲಕ್ಷ ಸಹಾಯಧನ ನೀಡಲಾಗುತ್ತದೆ. ಬ್ಯಾಂಕ್ ಮುಖಾಂತರ ನೆರವು ಪಡೆಯಬಹುದು’ ಎಂದರು.
ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ವಿಶ್ವನಾಥ್, ‘ಜಿಲ್ಲೆಯಲ್ಲಿ ಹುಣಸೆ ಮತ್ತು ತೆಂಗು ಟೆಕ್ನಾಲಜಿ ಪಾರ್ಕ್ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.
ಬೆಂಗಳೂರು ಕೃಷಿ ವಿ.ವಿ ವಿಶ್ರಾಂತ ಕುಲಪತಿ ನಾರಾಯಣಗೌಡ, ತೋಟಗಾರಿಕೆ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ, ತೆಂಗು ಅಭಿವೃದ್ಧಿ ಮಂಡಳಿ ಉಪ ನಿರ್ದೇಶಕ ಗುರುರಾಜ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಗಂಗಾಧರಯ್ಯ, ನಿವೃತ್ತ ತೋಟಗಾರಿಕೆ ನಿರ್ದೇಶಕ ಎಲ್.ಹನುಮಯ್ಯ, ರಫ್ತು ಸಲಹೆಗಾರರಾದ ವೀಣಾ ವೆಂಕಟೇಶ್, ಸಿ.ನಾಗವೇಣಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.