ತುಮಕೂರು: ಪ್ರತಿ ದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವ, ಸರ್ಕಾರಕ್ಕೆ ಕೋಟಿಗಟ್ಟಲೇ ಆದಾಯ ತಂದು ಕೊಡುವ, ಸಾವಿರಾರು ಜನ ಸೇರುವ ಅಂತರಸನಹಳ್ಳಿ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.
ಮಾರುಕಟ್ಟೆ 8 ಎಕರೆ ವಿಸ್ತೀರ್ಣ ಹೊಂದಿದ್ದು, ವಿವಿಧ ಬಗೆಯ 336 ಮಳಿಗೆಗಳಿವೆ. ತಿಂಗಳಿಗೆ ₹6 ಲಕ್ಷದಿಂದ ₹7.50 ಲಕ್ಷ ಬಳಕೆದಾರರ ಶುಲ್ಕ ಸಂಗ್ರಹಿಸಲಾಗುತ್ತಿದೆ. ರಸ್ತೆ, ನೀರು, ನೆರಳು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕಾಗಿ ವರ್ತಕರಿಂದ ಶುಲ್ಕವನ್ನೂ ಪಡೆಯಲಾಗುತ್ತಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಮಾರುಕಟ್ಟೆ ಆವರಣ ಸೊರಗಿದೆ.
ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಳಿಗೆ ಮಾಲೀಕರು ರಸ್ತೆಯನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದ ವಾಹನಗಳ ಸಂಚಾರ ಕಷ್ಟಕರವಾಗುತ್ತಿದೆ. ನಿತ್ಯ ಬೆಳಗಿನ ಜಾವ 4 ಗಂಟೆ ವೇಳೆಗೆ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಆರಂಭವಾಗುತ್ತವೆ. ಜಿಲ್ಲೆಯ ವಿವಿಧ ಭಾಗಗಳಿಂದ ರೈತರು, ಜನರು, ವ್ಯಾಪಾರಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ವಾಹನ ಸಂಚಾರಕ್ಕೆ ಸರಿಯಾದ ರಸ್ತೆ ಇಲ್ಲದೆ ಬೆಳ್ಳಂ ಬೆಳಿಗ್ಗೆಯೇ ದಟ್ಟಣೆ ಉಂಟಾಗುತ್ತದೆ. ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಪ್ರತಿ ದಿನ ಕಸ ವಿಲೇವಾರಿ ಮಾಡಬೇಕು. ಆದರೆ ನಾಲ್ಕು ದಿನ, ಕೆಲವು ಸಲ ವಾರಕ್ಕೊಮ್ಮೆ ಕಸ ವಿಲೇವಾರಿಯಾಗುತ್ತದೆ. ಮಾರುಕಟ್ಟೆಗೆ ಬಂದವರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ಕಸ ಕೊಳೆತು ನಾರುವುದರಿಂದ ಜನರು ಉಸಿರಾಡಲು ಪ್ರಯಾಸ ಪಡಬೇಕು. ಮಾರುಕಟ್ಟೆ ಗೇಟ್‌ನಿಂದ ಹೊರಗಡೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಪ್ರಾಂಗಣ ಪೂರ್ತಿ ಎಪಿಎಂಸಿ ವ್ಯಾಪ್ತಿಗೆ ಒಳಪಡುತ್ತದೆ. ಟೆಂಡರ್ ಪಡೆದ ಸಂಸ್ಥೆಯವರು ಪ್ರತಿ ದಿನ ಕಸ ವಿಲೇವಾರಿ ಮಾಡಬೇಕು. ಆದರೆ, ಒಳ ಮತ್ತು ಹೊರಗಡೆ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ.
ಚರಂಡಿ ವ್ಯವಸ್ಥೆ ಕಲ್ಪಿಸಿದ್ದು, ಕೆಲಸ ಅರ್ಧಂಬರ್ಧ ಆಗಿದೆ. ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮಳೆಗಾಲದಲ್ಲಿ ಇದು ಮತ್ತಷ್ಟು ತೀವ್ರವಾಗುತ್ತದೆ. ನೀರು ನಿಂತಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತದೆ. ಎಪಿಎಂಸಿ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ.
ಪೊಲೀಸ್ ಗಸ್ತು ಬರಲ್ಲ: ಮಾರುಕಟ್ಟೆ ಪ್ರಾಂಗಣದಲ್ಲಿ ಜೇಬು ಕಳವು ಪ್ರಕರಣಗಳು ಸಾಮಾನ್ಯವಾಗಿದ್ದು, ಪೊಲೀಸ್ ಗಸ್ತು ಅಪರೂಪವಾಗಿದೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ. ಎಷ್ಟೇ ವಾಹನ ದಟ್ಟಣೆ ಇದ್ದರೂ ಯಾರೊಬ್ಬರೂ ಇತ್ತ ಸುಳಿಯುವುದಿಲ್ಲ. ‘ಹಬ್ಬ, ಹುಣ್ಣಿಮೆಗೊಮ್ಮೆ ಪೊಲೀಸರು ಬಂದು ಹೋಗುತ್ತಾರೆ. ವರ್ಷಕ್ಕೆ ಎರಡು ಸಲ ಮಾರುಕಟ್ಟೆಗೆ ಬಂದರೆ ಹೆಚ್ಚು. ಒಂದು ರೀತಿಯಲ್ಲಿ ಅಪರೂಪದ ಅತಿಥಿಗಳಾಗಿದ್ದಾರೆ’ ಎಂದು ವರ್ತಕ ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸರ್ವೀಸ್ ರಸ್ತೆಯಲ್ಲಿ ವಾಹನ ನಿಲುಗಡೆ
ಮಾರುಕಟ್ಟೆಗೆ ಪ್ರತಿ ದಿನ 800ರಿಂದ 1 ಸಾವಿರ ಜನ ಭೇಟಿ ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಜನ ಸಂದಣಿ ಹೆಚ್ಚಿರುತ್ತದೆ. ಇದುವರೆಗೆ ವಾಹನ ನಿಲುಗಡೆಗೆ ಸರಿಯಾದ ಜಾಗವೇ ಇಲ್ಲ. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಇದೀಗ ಮಹಾನಗರ ಪಾಲಿಕೆ ಮುಂದಾಗಿದೆ. ಶಿರಾ ಗೇಟ್ ಕಡೆಯಿಂದ ಕೆಎಸ್ಆರ್‌ಟಿಸಿ ಡಿಪೊ ವರೆಗಿನ ಸರ್ವೀಸ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಶೀಟ್ ಅಳವಡಿಸಿ ಬೈಕ್ ನಿಲ್ಲಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ‘ಮಾರುಕಟ್ಟೆಯಲ್ಲಿ ಮೇಲು ಚಾವಣಿ ಅಳವಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಈಚೆಗೆ ಭರವಸೆ ನೀಡಿದ್ದರು. ಕಾರ್ಯಕ್ರಮದ ನಿಮಿತ್ತ ಮಾರುಕಟ್ಟೆಗೆ ತೆರಳಿದ್ದ ಅವರಿಗೆ ವರ್ತಕರು ಗ್ರಾಹಕರು ಈ ಬಗ್ಗೆ ಮನವಿ ಮಾಡಿದ್ದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಮೇಲು ಚಾವಣಿ ಮಾಡಿದರೆ ಮಳೆ ಬಿಸಿಲಿಗೆ ತರಕಾರಿ ಸೊಪ್ಪು ಹಣ್ಣು ಹಾಳಾಗುವುದು ತಪ್ಪುತ್ತದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
ಹರಾಜು ಕಟ್ಟೆಯ ಅವಸ್ಥೆ
ಮಾರುಕಟ್ಟೆ ಆವರಣದಲ್ಲಿರುವ ಹರಾಜು ಕಟ್ಟೆ ಈಗ ಹಂದಿ ದನಗಳ ವಾಸಸ್ಥಾನವಾಗಿ ಬದಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಒಂದು ನೆಲೆ ಕಲ್ಪಿಸುವ ಉದ್ದೇಶದಿಂದ 10 ವರ್ಷಗಳ ಹಿಂದೆ ಕಟ್ಟೆ ನಿರ್ಮಿಸಲಾಗಿತ್ತು. ಇದನ್ನು ಈಗ ಯಾರೂ ಅಷ್ಟಾಗಿ ಬಳಸುತ್ತಿಲ್ಲ. ದನ ಹಂದಿಗಳ ಶೆಡ್ ಆಗಿದೆ. ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಕಟ್ಟೆ ಉಪಯೋಗಕ್ಕೆ ಬಾರದಂತಾಗಿದೆ. ಇದರ ಪಕ್ಕದಲ್ಲಿಯೇ ಕೊಳೆತ ಹಣ್ಣು ತರಕಾರಿ ಸೊಪ್ಪು ಸುರಿಯುತ್ತಿದ್ದಾರೆ. ಇಡೀ ಮಾರುಕಟ್ಟೆ ಕಸ ಇಲ್ಲಿಯೇ ಸಂಗ್ರಹವಾಗುತ್ತಿದೆ.
ಅಗತ್ಯ ಸೌಲಭ್ಯ ಕಲ್ಪಿಸಿ
ಭದ್ರತಾ ಸಿಬ್ಬಂದಿ ಯಾವಾಗ ಬರುತ್ತಾರೆ ಎಂಬುವುದು ಗೊತ್ತಿಲ್ಲ. ನೂರಾರು ವಾಹನಗಳು ಸಂಚರಿಸಿದರೂ ಇಲ್ಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿಲ್ಲ. ಕಳವು ಪ್ರಕರಣಗಳು ಹೆಚ್ಚಾಗಿವೆ. ಎಪಿಎಂಸಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಇತ್ತ ಗಮನ ಹರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕೃಷ್ಣ ತುಮಕೂರು ** ಅಂಗಡಿ ಮುಂದೆ ಬೈಕ್ ನಿಲುಗಡೆ ವಾಹನ ನಿಲುಗಡೆಗೆ ಒಂದು ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಸಾರ್ವಜನಿಕರು ಅಂಗಡಿ ಮುಂಭಾಗದಲ್ಲಿಯೇ ಬೈಕ್ ಕಾರು ನಿಲ್ಲಿಸುತ್ತಿದ್ದಾರೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಮಾರುಕಟ್ಟೆ ಪೂರ್ತಿ ಈ ಸಮಸ್ಯೆ ಇದೆ. ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಒಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಜಿ.ರಮೇಶ್ ವರ್ತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.