ADVERTISEMENT

ತುಮಕೂರು | ಪಾಲಿಕೆಗೆ 14 ಗ್ರಾ.ಪಂ, 54 ಹಳ್ಳಿ ಸೇರ್ಪಡೆ

48 ಚ.ಕಿ.ಮೀ.ನಿಂದ 174 ಚ.ಕಿ.ಮೀ.ಗೆ ಹೆಚ್ಚಳ; 3 ದಶಕದ ನಂತರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:35 IST
Last Updated 18 ಸೆಪ್ಟೆಂಬರ್ 2025, 5:35 IST
ತುಮಕೂರು ಮಹಾನಗರ ಪಾಲಿಕೆ
ತುಮಕೂರು ಮಹಾನಗರ ಪಾಲಿಕೆ   

ತುಮಕೂರು: ನಗರ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಪ್ರಕ್ರಿಯೆಗಳು ಚುರುಕು ಪಡೆದುಕೊಂಡಿದ್ದು, ನಗರದ ಸುತ್ತಮುತ್ತಲಿನ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಮೂರು ದಶಕಗಳ ನಂತರ ನಗರ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಸಜ್ಜಾಗಿ ನಿಂತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಿಸಿ, ಹೊಸದಾಗಿ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಪಾಲಿಕೆ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ನಗರ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನಿರ್ದೇಶಿಸಿದ್ದರು. ಅದರಂತೆ ಪಾಲಿಕೆ ವರದಿ ಸಿದ್ಧಪಡಿಸಿ, ಗಡಿಯನ್ನು ಗುರುತು ಮಾಡಿದೆ.

14 ಗ್ರಾ.ಪಂ ವ್ಯಾಪ್ತಿಯ 54 ಗ್ರಾಮಗಳು ಸೇರ್ಪಡೆಯಾದರೆ ನಗರ ವ್ಯಾಪ್ತಿಯು 48.06 ಚದರ ಕಿಲೋ ಮೀಟರ್‌ನಿಂದ 174.536 ಚ.ಕಿ.ಮೀ.ಗೆ ಹೆಚ್ಚಾಗಲಿದೆ. ಹಳ್ಳಿಗಳ ಸೇರ್ಪಡೆ ಪ್ರಕ್ರಿಯೆ ಮುಗಿದ ನಂತರ, ನಗರ ಪ್ರದೇಶದ ಈಗಿನ ವ್ಯಾಪ್ತಿಗೆ ಹೋಲಿಸಿದರೆ ಮೂರು ಪಟ್ಟು ದೊಡ್ಡದಾಗಲಿದೆ. 2023ರ ಅಂದಾಜಿನಂತೆ ನಗರ ಜನಸಂಖ್ಯೆ 4,07,718 ಇದ್ದು, ಹೊಸದಾಗಿ 2,50,963 ಜನಸಂಖ್ಯೆ ಸೇರ್ಪಡೆಯಾಗಲಿದೆ. ಒಟ್ಟು ಜನಸಂಖ್ಯೆ 6,58,681ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

1995ರಲ್ಲಿ ನಗರಸಭೆಯಾಗಿದ್ದ ಸಮಯದಲ್ಲಿ ನಗರದ ವಿಸ್ತರಣೆ ನಡೆದಿತ್ತು. ಕಳೆದ 30 ವರ್ಷಗಳಿಂದ ನಗರ ವ್ಯಾಪ್ತಿಯನ್ನು ವಿಸ್ತರಿಸಿರಲಿಲ್ಲ. ನಗರಸಭೆಗೆ ಇದ್ದ ವ್ಯಾಪ್ತಿಯನ್ನೇ ಉಳಿಸಿಕೊಂಡು ಮಹಾನಗರ ಪಾಲಿಕೆ ರಚನೆ ಮಾಡಿದ್ದು, 35 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿಗಳೂ ಸಹ ಅಭಿವೃದ್ಧಿಯತ್ತ ಸಾಗಿದ್ದು, ಗ್ರಾಮೀಣ ಸ್ವರೂಪವನ್ನು ಕಳೆದುಕೊಂಡು ನಗರ ಪ್ರದೇಶವಾಗಿ ರೂಪಾಂತರ ಹೊಂದಿವೆ. ಅಂತಹ ಗ್ರಾ.ಪಂ.ಗಳನ್ನು ನಗರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ನಗರಕ್ಕೆ ಸೇರ್ಪಡೆಯಾಗುವ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗಿದ್ದು, ನಗರದ ಸ್ವರೂಪ ಪಡೆದುಕೊಂಡಿವೆ. ನಗರದಲ್ಲಿ ನಿವೇಶನಗಳು ಸಿಗದಾಗಿದ್ದು, ಬೆಲೆಯೂ ದುಬಾರಿಯಾಗಿದೆ. ಹಾಗಾಗಿ ನಗರದ ಜನರು ಹೊರ ವಲಯಗಳಲ್ಲಿ ನಿವೇಶಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸತೊಡಗಿದ್ದಾರೆ. ನಗರ ಹಾಗೂ ಸುತ್ತಮುತ್ತ ಐದು ಎಂಜಿನಿಯರಿಗ್, ಮೂರು ವೈದ್ಯಕೀಯ ಕಾಲೇಜುಗಳಿದ್ದು, ಶಿಕ್ಷಣದ ಸಲುವಾಗಿ ಹೊರಗಡೆಯಿಂದ ಸಾವಿರಾರು ವಿದ್ಯಾರ್ಥಿಗಳು ನಗರಕ್ಕೆ ಬರುತ್ತಿದ್ದಾರೆ.

ವಸಂತನರಸಾಪುರದಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಯಾಗುತ್ತಿದ್ದು ಕಾರ್ಮಿಕ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ನಗರ ಪ್ರದೇಶ ಬೆಳವಣಿಗೆ ಕಾಣುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಿದೆ.

ಮಹಾನಗರ ಪಾಲಿಕೆಗೆ ಸೇರ್ಪಡೆ ಆಗಲಿರುವ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳ ವಿವರ.

ಎಲ್ಲಿಯವರೆಗೆ ಗಡಿ ವಿಸ್ತರಣೆ ಪೂರ್ವ ಭಾಗ:
ಸ್ವಾಂದೇನಹಳ್ಳಿ ಮುತ್ಸಂದ್ರ ವಡ್ಡರಹಳ್ಳಿ ಬೆಳಗುಂಬ ಕುಂದೂರು ಪಂಡಿನಹಳ್ಳಿ ಮಾರಾನಾಯಕನಪಾಳ್ಯ ಬಸವಾಪಟ್ಟಣ ಮೈದಾಳ ಕೊಂಡನಾಯಕನಹಳ್ಳಿ ಮಾದಗೊಂಡನಹಳ್ಳಿ ಕೆರೆ ಪೆಮ್ಮನಹಳ್ಳಿ ಮಂಚಕಲ್‌ಕುಪ್ಪೆ ಹಿರೇಹಳ್ಳಿ ಚಿಕ್ಕಹಳ್ಳಿ ನಂದಿಹಳ್ಳಿ. ಪಶ್ಚಿಮ ಭಾಗ: ಹಬ್ಬತ್ತನಹಳ್ಳಿ ಕೊಟ್ನಹಳ್ಳಿ ಪೆರಮನಹಳ್ಳಿ ಬುಗುಡನಹಳ್ಳಿ ಬೆಳ್ಳಾವಿ–ತುಮಕೂರು ಮುಖ್ಯ ರಸ್ತೆ ಹದ್ದುಗಿಡದ ರಸ್ತೆ ಹೆಬ್ಬಾಕ ಅಮಾನಿಕೆರೆ. ಉತ್ತರ ಭಾಗ: ಕೋರಾ ಅಮಾನಿಕೆರೆ ಹಂಚಿಹಳ್ಳಿ ಕೆರೆ ಊರುಕೆರೆ ಕುಚ್ಚಂಗಿ ಅಣ್ಣೇನಹಳ್ಳಿ ಅರಕೆರೆ ಅಮಲಾಪುರ ಕೋರ ಹೊಸಹಳ್ಳಿ. ದಕ್ಷಿಣ ಭಾಗ: ನಂದಿಹಳ್ಳಿ ಚಿಕ್ಕಹಳ್ಳಿ ಹಿರೇಹಳ್ಳಿ ಕಲ್ಲಹಳ್ಳಿ ಮೈದಾಳ ಶೆಟ್ಟಿಹಳ್ಳಿ ಪಾಲಸಂದ್ರ ಸಂಕಾಪುರ ಗೂಳೂರು ಹೊಸೂರು ಮಾನಂಗಿಕೆರೆ ಅಕ್ಕತಂಗಿಯರ ಕಟ್ಟೆ ಕಾವಲ್ (ಎ.ಕೆ.ಕಾವಲ್) ಕೈದಾಳ ಹದ್ದುಗಿಡದ ರಸ್ತೆ ಹೊಸಕೆರೆ ಅಮಾನಿಕೆರೆ ಹೆಗ್ಗೆರೆ ಗೊಲ್ಲಹಳ್ಳಿ (ಸಿದ್ಧಾರ್ಥ ನಗರ) ಮಲ್ಲಸಂದ್ರ ಹಬ್ಬತ್ತನಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.