ADVERTISEMENT

ತುಮಕೂರು | ನಿವೃತ್ತ ನೌಕರನ ಡಿಜಿಟಲ್‌ ಅರೆಸ್ಟ್‌; ₹3.90 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:40 IST
Last Updated 28 ಜನವರಿ 2026, 6:40 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ನಿವೃತ್ತ ನೌಕರನಿಗೆ ಬೆದರಿಕೆ ಒಡ್ಡಿ, ₹3.90 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮೆಳೆಕೋಟೆಯ ಟೂಡಾ ಬಡಾವಣೆಯ ಎಂ.ಡಿ.ಲೋಕೇಶ್‌ ಅವರಿಗೆ ಕರೆ ಮಾಡಿದ ವಂಚಕರು, ಮುಂಬೈ ಪೊಲೀಸರ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾರೆ.

‘ನಿಮ್ಮ ಆಧಾರ್‌ ಕಾರ್ಡ್‌ ಬಳಸಿ ಸಿಮ್‌ ಖರೀದಿಸಿ ಮುಂಬೈನಲ್ಲಿ ಬಳಸಲಾಗುತ್ತಿದೆ. ನಿಮ್ಮ ಹೆಸರಿನಲ್ಲಿ ಇಲ್ಲಿನ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಎಟಿಎಂ ಪಡೆಯಲಾಗಿದೆ. ಮದ್ದು, ಗಂಡು ಖರೀದಿ, ಚಿನ್ನ ಅಕ್ರಮ ಸಾಗಾಟಕ್ಕೆ ಹಣ ಬಳಸಲಾಗುತ್ತಿದೆ. ನೀವು ಪಿಎಫ್‌ಐ, ಭಯೋತ್ಪಾದಕರ ಜತೆಗೆ ಸಂಬಂಧ ಇಟ್ಟುಕೊಂಡಿದ್ದೀರಿ. ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಬೇಕಾಗುತ್ತದೆ’ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ.

ADVERTISEMENT

ತನಿಖೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ಈ ವಿಷಯ ತಿಳಿಸಬಾರದು ಎಂದು ಷರತ್ತು ಹಾಕಿದ್ದಾರೆ. ಲೋಕೇಶ್‌ ಅದರಂತೆ ಮಾಡಿದ್ದಾರೆ. ವಂಚಕರು ಹೇಳಿದ ಹಾಗೆ ವಿವಿಧ ಖಾತೆಗಳಿಗೆ ₹3.90 ಲಕ್ಷ ವರ್ಗಾಯಿಸಿದ್ದಾರೆ. ಕೊನೆಗೆ ಮನೆಯಲ್ಲಿ ವಿಚಾರ ತಿಳಿಸಿದ ನಂತರ ಇದು ಬೆದರಿಕೆ ಕರೆ ಎಂಬುವುದು ಗೊತ್ತಾಗಿದೆ.

ಹಣ ಪಡೆದು ವಂಚಿಸಿದವರನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

(ಸಾಂದರ್ಭಿಕ ಚಿತ್ರ)

ಶಿಕ್ಷಕನಿಗೆ ₹19 ಲಕ್ಷ ವಂಚನೆ; ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ

ತುಮಕೂರು: ಟ್ರೇಡಿಂಗ್‌ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಅಂತರಸನಹಳ್ಳಿಯ ಎಸ್‌ಎಲ್‌ಎನ್‌ ಬಡಾವಣೆ ಶಿಕ್ಷಕ ಕೆ.ಎಲ್‌.ರವಿಶಂಕರ ಎಂಬುವರು ₹19.21 ಲಕ್ಷ ಕಳೆದುಕೊಂಡಿದ್ದಾರೆ. ವಾಟ್ಸ್‌ ಆ್ಯಪ್‌ ಮುಖಾಂತರ ಪರಿಚಯವಾದ ಆರೋಪಿಗಳು ಟ್ರೇಡಿಂಗ್‌ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಲಿಂಕ್‌ ಕಳುಹಿಸಿ ‘DC FIN’ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಖಾತೆ ಪ್ರಾರಂಭಿಸುವಂತೆ ತಿಳಿಸಿದ್ದಾರೆ. ರವಿಶಂಕರ ಅದರಂತೆ ಮಾಡಿದ್ದಾರೆ. ವಂಚಕರು ಹೇಳಿದ ಯುಪಿಐ ಐ.ಡಿಗೆ ₹70 ಸಾವಿರ ವರ್ಗಾಯಿಸಿದ್ದಾರೆ. ಆ್ಯಪ್‌ನಲ್ಲಿ ಶೇ 6ರಷ್ಟು ಲಾಭ ಬಂದಿರುವುದಾಗಿ ತೋರಿಸಿದೆ. ‘ನಿಮಗೆ ಇಷ್ಟ ಬಂದಾಗ ಹಣ ವಿತ್‌ ಡ್ರಾ ಮಾಡಿಕೊಳ್ಳಬಹುದು. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು’ ಎಂದು ಹೇಳಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ₹19.06 ಲಕ್ಷ ವರ್ಗಾಯಿಸಿದ್ದಾರೆ. ಆ್ಯಪ್‌ನ ಖಾತೆಯಲ್ಲಿ ₹50 ಲಕ್ಷ ಹಣ ಇರುವುದಾಗಿ ತೋರಿಸಿದೆ. ಜ. 12ರಂದು ಹಣ ವಿತ್‌ ಡ್ರಾ ಮಾಡಿಕೊಳ್ಳಲು ಹೋದಾಗ ‘ಕಮಿಷನ್‌ ₹1 ಲಕ್ಷ ನೀಡಿದರೆ ಹಣ ವಾಪಸ್‌ ಬರುತ್ತದೆ’ ಎಂದು ಆರೋಪಿಗಳು ಕೇಳಿದ್ದಾರೆ. ರವಿ ಹಣ ವರ್ಗಾಯಿಸಿದ್ದಾರೆ. ಇದಾದ ಬಳಿಕ ‘ಸರ್ವರ್‌ ಬ್ಯುಸಿ ಇದ್ದು ಎರಡು–ಮೂರು ದಿನಗಳಲ್ಲಿ ನಿಮಗೆ ಹಣ ಸಿಗುತ್ತದೆ’ ಎಂದಿದ್ದಾರೆ. ಜ. 15ರಂದು ಮತ್ತೆ ಹಣ ಪಡೆಯಲು ಪ್ರಯತ್ನಿಸಿದಾಗ ‘DC FIN’ ಆ್ಯಪ್‌ ನಿಷ್ಕ್ರಿಯವಾಗಿದೆ. ವಾಟ್ಸ್‌ ಆ್ಯಪ್‌ ನಂಬರ್‌ಗೆ ಕರೆ ಮಾಡಿದಾಗ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚನೆಗೆ ಒಳಗಾದ ವಿಷಯ ತಿಳಿದ ನಂತರ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.