ತುಮಕೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಆರಂಭಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪೊಲೀಸ್ ಠಾಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಕರಣಗಳು ದಾಖಲಾಗುತ್ತಿಲ್ಲ.
ಕಳೆದ ಜೂನ್ 12ರಂದು ನಗರದ ಶಿರಾ ಗೇಟ್ ಬಳಿಯ 80 ಅಡಿ ರಸ್ತೆಯಲ್ಲಿ ಹೊಸದಾಗಿ ಡಿಸಿಆರ್‌ಇ ಪೊಲೀಸ್ ಠಾಣೆ ಆರಂಭಿಸಲಾಗಿದೆ. ಠಾಣೆ ಆರಂಭವಾಗಿ ಮೂರು ತಿಂಗಳು ಕಳೆದಿದ್ದರೂ ಈವರೆಗೂ ಠಾಣೆ ಹುಡುಕಿಕೊಂಡು ಹೋಗಿ ದೂರು ಸಲ್ಲಿಸಿದವರ ಸಂಖ್ಯೆ ಕೇವಲ 3!
ಪ್ರಾರಂಭದಲ್ಲಿಯೇ ಪ್ರಕರಣ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಎಸ್.ಸಿ, ಎಸ್.ಟಿ ಮೇಲಿನ ದೌರ್ಜನ್ಯ ಕಾಯ್ದೆಯಡಿ ದಾಖಲಾದ 36 ಪ್ರಕರಣಗಳನ್ನು ಡಿಸಿಆರ್‌ಇಗೆ ವರ್ಗಾಯಿಸಲಾಗಿದೆ. ಪ್ರಸ್ತುತ ಒಟ್ಟು 39 ಪ್ರಕರಣಗಳ ತನಿಖೆ ನಡೆಯುತ್ತಿದೆ.
ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಜಾತಿ ನಿಂದನೆ ಪ್ರಕರಣ ವಿಲೇವಾರಿಗೆ ವರ್ಷಗಟ್ಟಲೆ ಸಮಯ ಹಿಡಿಯುತ್ತಿತ್ತು. ಸಂತ್ರಸ್ತರು ಠಾಣೆ, ಕೋರ್ಟ್‌ಗೆ ಅಲೆಯುತ್ತಿದ್ದರು. ಅಲೆದಾಟ ತಪ್ಪಿಸಲು, ದೌರ್ಜನ್ಯ ತಡೆಗೆ ಕ್ರಮ ವಹಿಸಲು, ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರತ್ಯೇಕ ಠಾಣೆ ಪ್ರಾರಂಭಿಸಲಾಗಿದೆ.
‘ಡಿಸಿಆರ್‌ಇ ಠಾಣೆಗೆ ದೂರು ನೀಡಲು ಹೋದರೆ ಸ್ವೀಕರಿಸುತ್ತಿಲ್ಲ. ಆಯಾ ಸ್ಥಳೀಯ ಠಾಣೆಗಳಲ್ಲಿಯೇ ದೂರು ಕೊಡುವಂತೆ ಇಲ್ಲಿನ ಸಿಬ್ಬಂದಿ ವಾಪಸ್ ಕಳುಹಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಸಂತ್ರಸ್ತರು ಎಲ್ಲಿ ದೂರು ನೀಡಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರತ್ಯೇಕ ಠಾಣೆ ಇದ್ದು ಏನು ಪ್ರಯೋಜನ’ ಎಂಬುವುದು ಪರಿಶಿಷ್ಟರ ಅಸಮಾಧಾನದ ನುಡಿಗಳು.
ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯತ್ತ ಸಾಗುತ್ತಿದೆ. ಪ್ರಕರಣ ಶೀಘ್ರ ವಿಲೇವಾರಿಗೆ ಡಿಸಿಆರ್‌ಇ ಠಾಣೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿಲ್ಲ. ಸದ್ಯ ಒಬ್ಬರು ಡಿವೈಎಸ್‌ಪಿ ಸೇರಿದಂತೆ 13 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ ಈ ಸಂಖ್ಯೆ ಏನೇನೂ ಸಾಲುತ್ತಿಲ್ಲ.
‘ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಹಲವು ಪ್ರಕರಣಗಳನ್ನು ಡಿಸಿಆರ್‌ಇಗೆ ವರ್ಗಾಯಿಸಲಾಗುತ್ತಿದೆ. ಠಾಣೆಯ ಕಾರ್ಯಗಳು ಶುರುವಾಗಿ ಮೂರು ತಿಂಗಳು ಕಳೆದಿದ್ದು, ಕೆಲ ಪ್ರಕರಣಗಳ ತನಿಖೆ ಈಗಷ್ಟೇ ಚುರುಕು ಪಡೆದುಕೊಳ್ಳುತ್ತಿದೆ. ತನಿಖಾಧಿಕಾರಿ ಸೇರಿ ಇನ್ನೂ ಕನಿಷ್ಠ 10 ಮಂದಿಯನ್ನು ಠಾಣೆಗೆ ನೇಮಿಸಿದರೆ ಕೆಲಸಗಳು ವೇಗ ಪಡೆಯಲಿವೆ’ ಎಂದು ಡಿಸಿಆರ್‌ಇ ಠಾಣೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.