
ತುಮಕೂರು: ಸದಾ ಗದ್ದಲ, ಗ್ರಾಹಕರಿಂದ ತುಂಬಿರುತ್ತಿದ್ದ, ಒಂದಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ವಾಣಿಜ್ಯ ಮಳಿಗೆಗಳು ನಿಶ್ಯಬ್ದವಾಗಿವೆ. ಹಲವರಿಗೆ ಉದ್ಯೋಗ ನೀಡಿ, ಬದುಕು ಬೆಳಗಿದ ಮಳಿಗೆಗಳಲ್ಲಿ ಈಗ ಕತ್ತಲು ಕವಿದಿದೆ.
ಆನ್‌ಲೈನ್ ವಹಿವಾಟು ಹೆಚ್ಚಳ, ಗ್ರಾಹಕರ ಕೊರತೆ, ವ್ಯಾಪಾರ ಕುಸಿತದ ಕಾರಣದಿಂದ ವಾಣಿಜ್ಯ ಮಳಿಗೆಗಳಿಗೆ ಹಲವೆಡೆ ಬೀಗ ಜಡಿಯಲಾಗಿದೆ. ನಗರದ ಬಟವಾಡಿ ಎಪಿಎಂಸಿ, ಅಂತರಸನಹಳ್ಳಿ ಮಾರುಕಟ್ಟೆ, ಮಂಡಿಪೇಟೆ, ಖಾಸಗಿ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆಯಲ್ಲಿ ಮಳಿಗೆಗಳು ಹಲವು ವರ್ಷಗಳಿಂದ ಖಾಲಿ ಖಾಲಿಯಾಗಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 230 ವಾಣಿಜ್ಯ ಮಳಿಗೆಗಳಿವೆ. ಎಸ್.ಎಸ್.ವೃತ್ತದ ಫುಡ್‌ಸ್ಟ್ರೀಟ್, ಖಾಸಗಿ ಬಸ್ ನಿಲ್ದಾಣ, ಕೋಡಿ ಬಸವೇಶ್ವರ ವೃತ್ತದ ಬಳಿಯ ಕೆ.ಆರ್.ಮಾರುಕಟ್ಟೆ, ಶಿರಾ ಗೇಟ್‌ನ ವಾಣಿಜ್ಯ ಕಟ್ಟಡ, ಎಸ್.ಎಸ್.ಪುರಂ, ಉಪ್ಪಾರಹಳ್ಳಿ ಕೆಳ ಸೇತುವೆ ಬಳಿ ಮಳಿಗೆ ನಿರ್ಮಿಸಲಾಗಿದೆ. ಇದರಲ್ಲಿ ಪ್ರಸ್ತುತ 55 ಮಳಿಗೆಗಳು ಖಾಲಿ ಉಳಿದಿವೆ.
ಅಂತರಸನಹಳ್ಳಿ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿರುವ ವಿವಿಧ ಬಗೆಯ 336 ಮಳಿಗೆಗಳ ಪೈಕಿ 5 ಮಳಿಗೆಗೆ ಬಾಗಿಲು ಹಾಕಲಾಗಿದೆ. ಬಟವಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ 26 ಮಳಿಗೆ ಮುಚ್ಚಿವೆ. ತಿಂಗಳಿಗೆ ₹1,250ರಿಂದ ₹54 ಸಾವಿರದ ವರೆಗೆ ಬಾಡಿಗೆ ನಿಗದಿ ಪಡಿಸಲಾಗಿದೆ. ಬಹುತೇಕ ಕಡೆಗಳಲ್ಲಿ ವಹಿವಾಟು ಇಲ್ಲದೆ, ಬಾಡಿಗೆ ಕಟ್ಟಲಾಗದೆ ಅಂಗಡಿಗಳು ಬಂದ್ ಆಗುತ್ತಿವೆ.
‘ಮಾರುಕಟ್ಟೆಯಲ್ಲಿ ವ್ಯಾಪಾರ– ವಹಿವಾಟು ಕುಸಿದಿದೆ. ಕೆಲವು ಸಲ ಇಡೀ ದಿನ ಮಳಿಗೆ ತೆರೆದರೂ ಒಂದು ಅಕ್ಕಿ ಮೂಟೆಯೂ ಮಾರಾಟವಾಗುವುದಿಲ್ಲ. ಸೋಮವಾರ, ಗುರುವಾರ ಹೊರೆತುಪಡಿಸಿದರೆ ಉಳಿದ ದಿನಗಳಲ್ಲಿ ವಹಿವಾಟು ಸರಿಯಾಗಿ ಆಗುವುದಿಲ್ಲ’ ಎಂದು ಬಟವಾಡಿ ಎಪಿಎಂಸಿ ವರ್ತಕ ಮೋಹನ್ ಕುಮಾರ್ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.
‘ಸೀಗೆಕಾಯಿ, ಹುಣಸೆ ಹಣ್ಣು, ರಾಗಿ ಮಾರುಕಟ್ಟೆಗೆ ಬಂದ ಸಮಯದಲ್ಲಿ ವಹಿವಾಟು ಉತ್ತಮವಾಗಿರುತ್ತದೆ. ಉಳಿದ ದಿನಗಳಲ್ಲಿ ಇಡೀ ಮಾರುಕಟ್ಟೆಯಲ್ಲಿ ಜನರ ಓಡಾಟ ಕಡಿಮೆ. ಆನ್‌ಲೈನ್‌ನಲ್ಲಿ ವ್ಯವಹಾರ ಶುರುವಾದ ನಂತರ ಮಾರುಕಟ್ಟೆಗೆ ಬಂದು ಸಾಮಗ್ರಿ ಖರೀದಿಸುವವರ ಸಂಖ್ಯೆ ಕ್ಷೀಣಿಸಿದೆ. ದಿನ ಕಳೆದಂತೆ ಇದು ಮತ್ತಷ್ಟು ಹೆಚ್ಚಾಗುತ್ತಿದೆ’ ಎಂದು ವರ್ತಕ ನರಸಿಂಹರಾಜು ಆತಂಕದಲ್ಲಿಯೇ ಪ್ರತಿಕ್ರಿಯಿಸಿದರು.
‘ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಖಾಸಗಿ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ತೀವ್ರವಾಗಿ ಇಳಿಕೆಯಾಯಿತು. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರೂ ಕಡಿಮೆಯಾದರು. ವಹಿವಾಟು ಸಂಪೂರ್ಣವಾಗಿ ಸ್ಥಗಿತವಾಯಿತು. ದಿನ ಕಳೆಯುವುದೇ ಕಷ್ಟವಾಗಿದೆ’ ಎಂದು ಖಾಸಗಿ ಬಸ್ ನಿಲ್ದಾಣದಲ್ಲಿ ಹೋಟೆಲ್ ನಡೆಸುತ್ತಿರುವ ತನ್ವೀರ್ ಹೇಳುತ್ತಾರೆ.
ಖಾಲಿ ಮಳಿಗೆ ಬಾಡಿಗೆ ನೀಡಲು ಕಾಲ ಕಾಲಕ್ಕೆ ಹರಾಜು ನಡೆಸಲಾಗುತ್ತದೆ. ಆದರೂ ಕೆಲವು ಹಾಗೆ ಉಳಿದುಕೊಂಡಿವೆ. ಅವುಗಳನ್ನು ಸಹ ಬಳಕೆಗೆ ನೀಡಲು ಕ್ರಮ ವಹಿಸಲಾಗುವುದುಬಿ.ಎಲ್.ಕೃಷ್ಣಪ್ಪ ಕಾರ್ಯದರ್ಶಿ ಎಪಿಎಂಸಿ ಬಟವಾಡಿ
ಮಾರುಕಟ್ಟೆ ಅವ್ಯವಸ್ಥೆಯ ಆಗರ
ಬಟವಾಡಿ ಮಾರುಕಟ್ಟೆ ಅವ್ಯವಸ್ಥೆಯ ಆಗರವಾಗಿದೆ. ಯಾವುದೇ ರಸ್ತೆಗಳು ಸರಿಯಾಗಿಲ್ಲ. ಗುಂಡಿಗಳಿಂದ ತುಂಬಿಕೊಂಡಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಸ್ತೆಯ ಮೂಲೆಗಳಲ್ಲಿ ಕಸದ ರಾಶಿ ಹಾಕಲಾಗುತ್ತಿದೆ. ಮಾರುಕಟ್ಟೆ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಕುಡಿಯುವ ನೀರು ಚರಂಡಿ ಸೇರಿ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಮಾರುಕಟ್ಟೆ ವ್ಯವಸ್ಥೆ ಕಂಡವರು ಮತ್ತೊಮ್ಮೆ ಇತ್ತ ಬರುತ್ತಿಲ್ಲ.
ಖಾಸಗಿ ಬಸ್ ನಿಲ್ದಾಣದಲ್ಲೇ 40 ಮಳಿಗೆ ಖಾಲಿ
ಮಹಾನಗರ ಪಾಲಿಕೆಗೆ ಸೇರಿರುವ ಖಾಸಗಿ ಬಸ್ ನಿಲ್ದಾಣದಲ್ಲಿ 40 ಮಳಿಗೆಗಳು ಖಾಲಿ ಉಳಿದಿವೆ. ಹಲವು ವರ್ಷಗಳಿಂದ ಇವು ಬಾಗಿಲು ತೆಗೆದಿಲ್ಲ. ಈ ಹಿಂದೆ ಮೊಬೈಲ್ ಮಾರಾಟ ಕಾಂಡಿಮೆಂಟ್ಸ್ ಹೂವಿನ ವ್ಯಾಪಾರದ ಕೇಂದ್ರವಾಗಿದ್ದ ಅಂಗಡಿಗಳಲ್ಲಿ ಈಗ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಹರಾಜು ಕರೆದ ಪ್ರತಿ ಸಾರಿ ಮಳಿಗೆ ಪಡೆಯಲು ಯಾರೊಬ್ಬರೂ ಭಾಗವಹಿಸುತ್ತಿಲ್ಲ. ಇದರಿಂದ ಪಾಲಿಕೆಗೂ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಬಾಡಿಗೆ ಹೆಚ್ಚಿದ್ದು ಅಷ್ಟು ಹಣ ಸಂಗ್ರಹವಾಗುವುದಿಲ್ಲ ಎಂದು ತುಂಬಾ ಜನ ಇದರಿಂದ ದೂರ ಉಳಿಯುತ್ತಿದ್ದಾರೆ. ಇದರ ಜತೆಗೆ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆರಂಭವಾದ ನಂತರ ಖಾಸಗಿ ಬಸ್ ನಿಲ್ದಾಣದ ಮಳಿಗೆಗಳ ವಹಿವಾಟು ಅರ್ಧದಷ್ಟು ಕಡಿಮೆಯಾಗಿದೆ.
ಆರಂಭವಾಗದ ಮಳಿಗೆ
ಸ್ಮಾರ್ಟ್ ಸಿಟಿಯಿಂದ ವಿವಿಧೆಡೆ ₹85 ಲಕ್ಷ ವೆಚ್ಚದಲ್ಲಿ ಒಂದು ಪುಟ್ಟ ಮಳಿಗೆ ಒಳಗೊಂಡಂತೆ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ಹಲವು ತಿಂಗಳು ಕಳೆದರೂ ಮಳಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಎಸ್.ಪಿ ಕಚೇರಿ ಜೂನಿಯರ್ ಕಾಲೇಜು ಮೈದಾನದ ಮುಂಭಾಗ ಎಸ್‌ಎಸ್‌ಐಟಿ ಕಾಲೇಜು ಹತ್ತಿರ ಮರಳೂರು ಬಳಿಯ ರಿಂಗ್ ರಸ್ತೆ ಮೆಳೆಕೋಟೆ ಸೇರಿ ಐದು ಕಡೆ ತಂಗುದಾಣ ಆರಂಭಿಸಲಾಗಿದೆ. ಒಂದಕ್ಕೆ ₹17 ಲಕ್ಷ ವೆಚ್ಚವಾಗಿದೆ. ಮಳಿಗೆ ಹಂಚಿಕೆ ಕಾರ್ಯ ಮುಂದೆ ಸಾಗಿಲ್ಲ.
ವಹಿವಾಟು ಏರು–ಪೇರು
ಕೆಲವರು ಬಾಡಿಗೆ ಕಟ್ಟಲಾಗದೆ ಮಳಿಗೆ ಬಂದ್ ಮಾಡಿದ್ದಾರೆ. ವಹಿವಾಟು ಏರು–ಪೇರಾಗಿ ಹಲವರು ಬಾಗಿಲು ಹಾಕಿದ್ದಾರೆ. ಸಣ್ಣ–ಪುಟ್ಟ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯ ಒಳಗಿನ ಮೊದಲ ಅಡ್ಡ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಮಳಿಗೆ ಹಾಗೆಯೆ ಬಿಟ್ಟಿದ್ದಾರೆ. ಆನ್‌ಲೈನ್ ವೆಬ್‌ಸೈಟ್‌ಗಳು ಹೆಚ್ಚಾದ ಬಳಿಕ ಸ್ಥಳೀಯ ವರ್ತಕರು ಮಾರಾಟಗಾರರಿಗೆ ಸಮಸ್ಯೆಯಾಗುತ್ತಿದೆ. ಬಾಹುಬಲಿ ವರ್ತಕ ಎಪಿಎಂಸಿ ಮಾರುಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.