ADVERTISEMENT

ತುಮಕೂರು: ಕುರುಬರ ಸೇರ್ಪಡೆಗೆ ನಾಯಕರ ವಿರೋಧ

ಜಿಲ್ಲಾ ಆಡಳಿತದಿಂದ ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:54 IST
Last Updated 8 ಅಕ್ಟೋಬರ್ 2025, 7:54 IST
<div class="paragraphs"><p>ತುಮಕೂರಿನಲ್ಲಿ ಮಂಗಳವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.</p></div>

ತುಮಕೂರಿನಲ್ಲಿ ಮಂಗಳವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

   

ತುಮಕೂರು: ‘ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬರ ಸೇರ್ಪಡೆಗೆ ನನ್ನ ಅಭ್ಯಂತರವಿಲ್ಲ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದರೆ, ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಸ್‌.ಆರ್‌.ಶಾಂತಲಾ ರಾಜಣ್ಣ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಹೋರಾಟ ನಮ್ಮದು, ಹಕ್ಕು ಇನ್ನೊಬ್ಬರದ್ದು ಎಂಬಂತಾಗಿದೆ. ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ಸುಮಾರು 40 ವರ್ಷ ಹೋರಾಟ ನಡೆಸಿತು. ಶೇ 7.5ರಷ್ಟು ಮೀಸಲಾತಿ ದೊರೆತ ನಂತರ ಅನ್ಯ ಜಾತಿಗಳನ್ನು ಎಸ್‌.ಟಿ ಪಟ್ಟಿಗೆ ಸೇರಿಸುವುದು ಎಷ್ಟು ಸರಿ’ ಎಂದು ಶಾಂತಲಾ ಪ್ರಶ್ನಿಸಿದ್ದಾರೆ.

ADVERTISEMENT

ನಗರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಿರುವ ಜನಸಂಖ್ಯೆಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನ ಸಕಾಲಕ್ಕೆ ತಲುಪುತ್ತಿಲ್ಲ. ಬುಡಕಟ್ಟು ಉಪಯೋಜನೆ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದೆಲ್ಲದರ ಮಧ್ಯೆ ಅನ್ಯ ಸಮಾಜವನ್ನು ಎಸ್‌.ಟಿ.ಗೆ ಸೇರಿಸಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಸಮುದಾಯ ಭವನದಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಸಮುದಾಯದ ಜನರು ಎಲ್ಲರಂತೆ ಶುಲ್ಕ ಪಾವತಿಸಿ ಭವನ ಪಡೆಯಬೇಕಾಗಿದೆ. ಇಲ್ಲಿ ಕನಿಷ್ಠ ಕುರ್ಚಿ, ಟೇಬಲ್‌, ಅಡುಗೆ ಮಾಡಲು ಪಾತ್ರೆಯ ವ್ಯವಸ್ಥೆ ಇಲ್ಲ. ಎಲ್ಲವನ್ನು ಹೊರಗಡೆಯಿಂದ ತರಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಬಿ.ಸುರೇಶ್‌ಗೌಡ, ‘ಸಾಮಾನ್ಯ ಕುಟುಂಬದ ವ್ಯಕ್ತಿ ಮಹಾಕಾವ್ಯ ರಚಿಸಿದರು. ಎಲ್ಲರು ವಾಲ್ಮೀಕಿ ಪುಸ್ತಕ ಓದಬೇಕು. ಒಳ್ಳೆಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಟೌನ್‌ಹಾಲ್‌ ವೃತ್ತದಿಂದ ವಾಲ್ಮೀಕಿ ಭವನದ ವರೆಗೆ ಮೆರವಣಿಗೆ ನಡೆಯಿತು. ಸಮುದಾಯದ ತಿಪ್ಪೇರುದ್ರಪ್ಪ, ಡಾ.ಸುನೀತಾ, ನಾಗೇಂದ್ರ ಪ್ರಸಾದ್‌, ದೊಡ್ಡಯ್ಯ, ಸರಸ್ವತಮ್ಮ ಅವರನ್ನು ಸನ್ಮಾನಿಸಲಾಯಿತು. ಲೇಖಕಿ ಅನುಸೂಯ ಎಸ್‌.ಕೆಂಪನಹಳ್ಳಿ ಉಪನ್ಯಾಸ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಮುಖಂಡರಾದ ಬಿ.ಜಿ.ಕೃಷ್ಣಪ್ಪ, ಕೆಂಪಹನುಮಯ್ಯ, ಕೆ.ರಾಮಂಜನಯ್ಯ, ಕೃಷ್ಣಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯಿತು

ವಾಲ್ಮೀಕಿಗೆ ಅವಮಾನ: ಪರಮೇಶ್ವರ ವಿಷಾದ

ಬೆಳಿಗ್ಗೆ ಎದ್ದು ರಾಮಾಯಣದ ಸಾವಿರಾರು ಶ್ಲೋಕ ಹೇಳುವ ಸಮುದಾಯದವರು ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಾರೆಯೇ? ಅವರು ವಾಲ್ಮೀಕಿಯನ್ನು ಬುಡಕಟ್ಟು ಜನ ಎಂದು ಕರೆದಿದ್ದಾರೆ. ವಿಶ್ವ ವಿಖ್ಯಾತಿ ಪಡೆದ ಗ್ರಂಥ ರಚಿಸಿದವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿರುವುದು ವಾಲ್ಮೀಕಿಗೆ ಎಸಗುವ ಅವಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವಿಷಾದಿಸಿದರು. ವಾಲ್ಮೀಕಿ ಸಮುದಾಯದಲ್ಲಿ ಶೇ 54ರಷ್ಟು ವಿದ್ಯಾವಂತರಿದ್ದಾರೆ. ಈ ಸಂಖ್ಯೆ ಹೆಚ್ಚಾಗುವುದು ಯಾವಾಗ? ವಾಲ್ಮೀಕಿ ಸಮುದಾಯ ಯಾವ ಸ್ಥಿತಿಯಲ್ಲಿದೆ ಎಂಬುವುದನ್ನು ಅಧ್ಯಯನ ಮಾಡಬೇಕು. ಇದಕ್ಕಾಗಿಯೇ ಜಾತಿವಾರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಬಸವಣ್ಣ ಸಮಾನತೆ ಬಗ್ಗೆ ಮಾತನಾಡಿದ್ದರು ಈಗ ಏನಾಗಿದೆ. ಜಾತಿಯ ಒಳಗೆ ಹಲವು ಉಪ ಜಾತಿಗಳಾಗಿವೆ. ಪರಿಶಿಷ್ಟ ಜಾತಿಯಲ್ಲಿ 101 ಒಕ್ಕಲಿಗರಲ್ಲಿ 45-50 ಜಾತಿಗಳಿವೆ. ಲಿಂಗಾಯತರು ನಾವು ವೀರಶೈವ ನಾವು ಲಿಂಗಾಯತ ಎಂದು ಕಿತ್ತಾಡಿಕೊಂಡು ಕೂತಿದ್ದಾರೆ. ಭವಿಷ್ಯದ ಭಾರತಕ್ಕೆ ಜಾತಿ ಧರ್ಮದ ವ್ಯವಸ್ಥೆ ಬೇಕಾಗಿಲ್ಲ. ಉತ್ತಮ ಸಮಾಜ ಕಟ್ಟಬೇಕಾಗಿದೆ. ಈ ಬಗ್ಗೆ ಎಲ್ಲರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಲಿದೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ರಚನೆಗೆ ಕ್ರಮ ವಹಿಸಲಾಗುವುದು
-ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.