
ತುಮಕೂರು: ಜಮೀನಿನ ಖಾತೆ ಬದಲಾವಣೆಗೆ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಯಾತ್ಸಂದ್ರ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಎಂಬುವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಬಿ.ಯೋಗೀಶ್ ತಮ್ಮ ತಾತನ ಹೆಸರಿನಲ್ಲಿದ್ದ 38 ಗುಂಟೆ ಜಮೀನನ್ನು ಅವರ ತಂದೆ ಹೆಸರಿಗೆ ಖಾತೆ ಬದಲಾವಣೆ ಮಾಡಿಸಲು ಮಂಜುನಾಥ ಬಳಿ ಹೋಗಿದ್ದರು. ಇದಕ್ಕಾಗಿ ಮಂಜುನಾಥ ₹10 ಸಾವಿರ ಲಂಚ ಕೇಳಿದ್ದರು. ಯೋಗೀಶ್ ಹಣ ನೀಡಿದ್ದರು. ಮತ್ತೆ ₹10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಇಷ್ಟವಿಲ್ಲದ ಯೋಗೀಶ್ ಲೋಕಾಯುಕ್ತ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಹತ್ತಿರ ಲಂಚದ ಹಣ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮಂಜುನಾಥ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಕೆ.ಎಂ.ಸಂತೋಷ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಬಿ.ಮೊಹಮ್ಮದ್ ಸಲೀಂ, ಕೆ.ಸುರೇಶ, ಶಿವರುದ್ರಪ್ಪ ಮೇಟಿ, ಟಿ.ರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.