ADVERTISEMENT

ತುಮಕೂರಿಗೆ ಮೆಟ್ರೊ| ₹20,649 ಕೋಟಿ ವೆಚ್ಚ: ಸಚಿವ ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:48 IST
Last Updated 30 ಸೆಪ್ಟೆಂಬರ್ 2025, 5:48 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಬೆಂಗಳೂರಿನ ಮಾದವರದಿಂದ ತುಮಕೂರುವರೆಗೆ ಮೆಟ್ರೊ ವಿಸ್ತರಿಸಲು ಅಂದಾಜು ₹20,649 ಕೋಟಿ ವೆಚ್ಚ ಆಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಸೋಮವಾರ ಹೇಳಿದರು.

ಮೆಟ್ರೊ ವಿಸ್ತರಣೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧ ಪಡಿಸಲು ಸೆ. 25ರಂದು ಸರ್ಕಾರ ಆದೇಶ ಹೊರಡಿಸಿದೆ. ಬಿಎಂಆರ್‌ಸಿಎಲ್‌ಗೆ ಡಿಪಿಆರ್ ಹೊಣೆ ವಹಿಸಲಾಗಿದೆ. ಇದಕ್ಕಾಗಿ ₹3 ಕೋಟಿ ಖರ್ಚು ಮಾಡಲಾಗುತ್ತಿದೆ. ಆದಷ್ಟು ಶೀಘ್ರ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ ಎಂದು‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಿಎಂಆರ್‌ಸಿಎಲ್‌ ವತಿಯಿಂದ ಈಗಾಗಲೇ ಕಾರ್ಯ ಸಾಧ್ಯತಾ ವರದಿ ಸಲ್ಲಿಕೆಯಾಗಿದೆ. ನಗರದ ವರೆಗೆ ಮೆಟ್ರೊ‌ ವಿಸ್ತರಿಸುವ ಯೋಜನೆ ಒಂದೊಂದು ಹಂತ ದಾಟಿಕೊಂಡು ಮುಂದೆ ಸಾಗುತ್ತಿದೆ. ಮೆಟ್ರೊ ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗಕ್ಕೆ ವಿಸ್ತರಿಸಲು ಹೊಸ ಕಾನೂನು ರೂಪಿಸಬೇಕು. ಅನೇಕ ನಿಯಮ ಪಾಲಿಸಬೇಕಿದೆ ಎಂದು ಹೇಳಿದರು.

ADVERTISEMENT

ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಮೆಟ್ರೊ ಕಾಮಗಾರಿ ನಡೆಸಲಾಗುತ್ತದೆ. ಡಿಪಿಆರ್‌ ಸಲ್ಲಿಕೆಯಾದ ನಂತರ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಹೊಸದಾಗಿ 13 ಸರ್ಕಾರಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಈಗಿರುವ 58 ಹಾಸ್ಟೆಲ್‌ಗಳಲ್ಲಿ 1150 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ
ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ

1085 ಕಂದಾಯ ಗ್ರಾಮ

ಜಿಲ್ಲೆಯಲ್ಲಿ ಹೊಸದಾಗಿ 1085 ಕಂದಾಯ ಗ್ರಾಮ ಗುರುತಿಸಲಾಗಿದೆ. ಈ ವರ್ಷದ ಅಂತ್ಯಕ್ಕೆ 28759 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು‌ ಸಚಿವ ಪರಮೇಶ್ವರ ಹೇಳಿದರು. ಅ. 15ರಿಂದ ಜಿಲ್ಲೆಯಾದ್ಯಂತ ಇ-ಸ್ವತ್ತು ಅಭಿಯಾನ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿಯಿಂದ ಇ–ಸ್ವತ್ತು ವಿತರಿಸಲಾಗುತ್ತದೆ. ಪ್ರತಿ ತಾಲ್ಲೂಕಿಗೆ 25 ಸಾವಿರದಂತೆ ಜಿಲ್ಲೆಯಲ್ಲಿ 2.50 ಲಕ್ಷ ಇ–ಸ್ವತ್ತು ಸೃಜನೆಯ ಗುರಿ ನಿಗದಿ ಪಡಿಸಲಾಗಿದೆ. ಈಗಾಗಲೇ 3.25 ಲಕ್ಷ ಇ-ಸ್ವತ್ತು ಸೃಜನೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.