
ತುಮಕೂರಿನಲ್ಲಿ ಶನಿವಾರ ಇತಿಹಾಸಕಾರ ಡಿ.ಎನ್.ಯೋಗೀಶ್ವರಪ್ಪ ರಚನೆಯ ‘ನೊಳಂಬ ಲಿಂಗಾಯತರು’ ಕೃತಿ ಬಿಡುಗಡೆಗೊಳಿಸಲಾಯಿತು.
ತುಮಕೂರು: ಅತ್ಯಂತ ವಾಸ್ತವದ ನೆಲೆಯಲ್ಲಿ ‘ನೊಳಂಬ ಲಿಂಗಾಯತರು’ ಕೃತಿ ರಚಿಸಲಾಗಿದೆ. ಇದು ಸಮುದಾಯದ ಸಮಗ್ರ ಅಧ್ಯಯನವಾಗಿದೆ ಎಂದು ಶರಣತತ್ವ ಚಿಂತಕ ಬಸವರಾಜಪ್ಪ ವೆಂಕಟಾಪುರ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಇತಿಹಾಸಕಾರ ಡಿ.ಎನ್.ಯೋಗೀಶ್ವರಪ್ಪ ರಚನೆಯ ‘ನೊಳಂಬ ಲಿಂಗಾಯತರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಕೃತಿ ನೊಳಂಬ ಲಿಂಗಾಯತರ ಸಾಂಸ್ಕೃತಿಕ ಬದುಕಿನ ಸೂಕ್ಷ್ಮ ಆಯಾಮಗಳನ್ನು ಚರ್ಚಿಸುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ನೊಳಂಬ ಲಿಂಗಾಯತರು ಗುರು ಸಿದ್ಧರಾಮೇಶ್ವರರ ಆರಾಧಕರು. ಪ್ರತಿ ವರ್ಷ ಸಿದ್ಧರಾಮೇಶ್ವರರ ಜಯಂತಿ ಆಚರಿಸುವ ಮೂಲಕ ಸಮಾಜವನ್ನು ಸಂಘಟಿಸಲಾಗುತ್ತಿದೆ. ನೊಳಂಬ ಲಿಂಗಾಯತ ಸಂಘ ಸ್ಥಾಪಿಸಿ ಜನಮುಖಿ, ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಕೃತಿಕಾರ ಡಿ.ಎನ್.ಯೋಗೀಶ್ವರಪ್ಪ, ‘ಲಿಂಗಾಯತರಲ್ಲಿ 98 ಒಳ ಪಂಗಡಗಳಿದ್ದು, ನೊಳಂಬ ಲಿಂಗಾಯತರು ಎಂಟು ಜಿಲ್ಲೆಗಳಲ್ಲಿ ಗಣನೀಯವಾಗಿ ನೆಲೆಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸಮುದಾಯದ ಸಂಸ್ಕೃತಿ ಅಳಿಸಿ ಹೋಗುತ್ತಿದೆ. ಆ ಸಂಸ್ಕೃತಿ ದಾಖಲಿಸುವ ಉದ್ದೇಶದಿಂದ ಕೃತಿ ರಚಿಸಲಾಗಿದೆ’ ಎಂದು ಹೇಳಿದರು.
ಲೇಖಕಿ ಸುಶೀಲಾ ಸದಾಶಿವಯ್ಯ, ಪ್ರಾಧ್ಯಾಪಕ ಎಂ.ಗೋವಿಂದರಾಯ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ನಾಗಭೂಷಣ್, ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ಪ್ರಕಾಶಕ ಸತೀಶ್ ಹೆಬ್ಬಾಕ, ಬಸವ ಕೇಂದ್ರದ ಅಧ್ಯಕ್ಷೆ ಸಿದ್ಧಗಂಗಮ್ಮ ಬಿ.ಸಿದ್ಧರಾಮಣ್ಣ, ಪದಾಧಿಕಾರಿಗಳಾದ ಚಂದ್ರಶೇಖರ್, ಕಲ್ಪನಾ ಉಮೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.