ADVERTISEMENT

ತುಮಕೂರು | ಸಮೀಕ್ಷೆ: ತರಬೇತಿಯಿಂದ ಹೊರಗುಳಿದ ಶಿಕ್ಷಕರು

ಆಸನಗಳ ಕೊರತೆ, ಅವ್ಯವಸ್ಥೆ; ಶಿಕ್ಷಕರು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:17 IST
Last Updated 21 ಸೆಪ್ಟೆಂಬರ್ 2025, 7:17 IST
ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮೆಟ್ಟಿಲು ಬಳಿ ಕುಳಿತಿದ್ದ ಶಿಕ್ಷಕಿಯರು
ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮೆಟ್ಟಿಲು ಬಳಿ ಕುಳಿತಿದ್ದ ಶಿಕ್ಷಕಿಯರು   

ತುಮಕೂರು: ರಾಜ್ಯ ಸರ್ಕಾರ ಕೈಗೊಂಡಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಪ್ರಾರಂಭದಲ್ಲಿಯೇ ಗೊಂದಲ ಮೂಡಿದ್ದು, ತರಬೇತಿ ವೇಳೆ ಅವ್ಯವಸ್ಥೆಯಿಂದ ಶಿಕ್ಷಕರು ಪರದಾಡಿದರು. ಸಾಕಷ್ಟು ಮಂದಿ ತರಬೇತಿಯಿಂದಲೇ ಹೊರಗುಳಿದರು.

ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕು ವ್ಯಾಪ್ತಿಯ ಶಿಕ್ಷಕರಿಗೆ ಸಮೀಕ್ಷೆ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸುಮಾರು 1,500ಕ್ಕೂ ಹೆಚ್ಚು ಶಿಕ್ಷಕರು ಬಂದಿದ್ದರು. ಕಲಾ ಕ್ಷೇತ್ರದಲ್ಲಿ ಕೇವಲ 600 ಜನಕ್ಕಷ್ಟೇ ಆಸನಗಳ ವ್ಯವಸ್ಥೆ ಇದೆ.

ಬೆಳಿಗ್ಗೆ 10.30 ಗಂಟೆಗೆ ತರಬೇತಿ ಆರಂಭವಾಗಬೇಕಿತ್ತು. ಮಧ್ಯಾಹ್ನ 12.30 ಗಂಟೆಯಾದರೂ ಆಸನ ವ್ಯವಸ್ಥೆ ಇಲ್ಲದೆ ಶಿಕ್ಷಕರು ನಿಂತೇ ಇದ್ದರು. ನಂತರ ಹೆಚ್ಚುವರಿ ಕುರ್ಚಿಗಳ ವ್ಯವಸ್ಥೆ ಮಾಡಲಾಯಿತು. ಈ ವೇಳೆಗಾಗಲೇ ಹಲವರು ಮನೆಯ ಕಡೆ ಹೆಜ್ಜೆ ಹಾಕಿದರು.‌ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಗ್ರಾಮಾಂತರ ವಿಭಾಗದ ಶಿಕ್ಷಕರು, ಮಧ್ಯಾಹ್ನದ ನಂತರ ನಗರದ ಶಿಕ್ಷಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿತ್ತು. ಬೆಳಿಗ್ಗೆಯೇ ಸಮಸ್ಯೆ ಸೃಷ್ಟಿಯಾಗಿ ಶಿಕ್ಷಕರು ಸಂಕಷ್ಟ ಅನುಭವಿಸಿದರು.

ADVERTISEMENT

‘ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ ಹೇಗೆ? ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಯಾಕೆ ಮೀನಮೇಷ ಎಣಿಸುತ್ತಿದ್ದಾರೆ. ಅಗತ್ಯ ಸೌಲಭ್ಯ ಕಲ್ಪಿಸದಿದ್ದರೆ ಹೇಗೆ?’ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

‘ತರಬೇತಿಗೆ ಕರೆದ ಮೇಲೆ ಅಗತ್ಯ ವ್ಯವಸ್ಥೆ ಮಾಡಬೇಕು. ಎಲ್ಲರನ್ನು ಒಂದೆಡೆ ಕೂಡಿಹಾಕಿ ಕುರಿ ದೊಡ್ಡಿ ಮಾಡಿದ್ದಾರೆ. ಬೆಳಿಗ್ಗೆ 10.30 ಗಂಟೆಯಿಂದ ಕಾಯುತ್ತಿದ್ದರೂ ಒಂದು ಕುರ್ಚಿ ತರಲು ಆಗಿಲ್ಲ. 1,500 ಶಿಕ್ಷಕರು ಭಾಗವಹಿಸಿದ್ದಾರೆ.‌ ಪ್ರಾರಂಭದಲ್ಲಿಯೇ ಹೀಗಾದರೆ ಹೇಗೆ? ಯಾರೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ’ ಎಂದು ಬೇಸರ ಹೊರ ಹಾಕಿದರು.

ಸಮೀಕ್ಷೆಗೆ ಆ್ಯಪ್ ಬಳಕೆ, ದತ್ತಾಂಶ ಸಂಗ್ರಹ ಸೇರಿ ಹಲವು ವಿಚಾರಗಳ ಕುರಿತು ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು.

ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.