ADVERTISEMENT

ಕಾಲಕ್ಕೆ ತಕ್ಕ ಕೌಶಲ ಬೆಳೆಸಿಕೊಳ್ಳಿ: ಮಾಣಿಕರಾವ್‌ ಎಂ.ಸಾಲುಂಖೆ

ಘಟಿಕೋತ್ಸವ ಭಾಷಣದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:46 IST
Last Updated 25 ಫೆಬ್ರುವರಿ 2020, 12:46 IST
ಟಿ.ಡಿ.ಲಾವಣ್ಯ(ಕನ್ನಡ ಸ್ನಾತಕೋತ್ತರ 3 ಚಿನ್ನದ ಪದಕ), ಎಸ್‌.ಎಚ್‌.ಮನೋಹರ್‌(ಎಂ.ಎಸ್ಸಿ.ಗಣಿತದಲ್ಲಿ 5 ಚಿನ್ನದ ಪದಕ) ಹಾಗೂ ಎಂ.ಸಿ.ದಿವ್ಯಾಮಣಿ(ಎಂ.ಕಾಂ.ನಲ್ಲಿ 4 ಚಿನ್ನ) ಅವರು ಸಂತಸ ಹಂಚಿಕೊಂಡರು.
ಟಿ.ಡಿ.ಲಾವಣ್ಯ(ಕನ್ನಡ ಸ್ನಾತಕೋತ್ತರ 3 ಚಿನ್ನದ ಪದಕ), ಎಸ್‌.ಎಚ್‌.ಮನೋಹರ್‌(ಎಂ.ಎಸ್ಸಿ.ಗಣಿತದಲ್ಲಿ 5 ಚಿನ್ನದ ಪದಕ) ಹಾಗೂ ಎಂ.ಸಿ.ದಿವ್ಯಾಮಣಿ(ಎಂ.ಕಾಂ.ನಲ್ಲಿ 4 ಚಿನ್ನ) ಅವರು ಸಂತಸ ಹಂಚಿಕೊಂಡರು.   

ತುಮಕೂರು: ಶ್ವೇತ ವಸ್ತ್ರಧಾರಿಗಳಾದ ವಿದ್ಯಾರ್ಥಿಗಳು ಅಲ್ಲಿ ಶಿಸ್ತಿನಿಂದ ಕುಳಿತು ಸಮಾರಂಭದಲ್ಲಿ ಭಾಗಿಯಾದರು. ತಮ್ಮ ಹೆಸರನ್ನು ನಿರೂಪಕರು ಕರೆದಾಗ ಸಾಧಕ ವಿದ್ಯಾರ್ಥಿಗಳು ಹೆಮ್ಮೆಯಿಂದ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದರು. ಅತಿಥಿ ಮಹೋದಯರಿಂದ ಚಿನ್ನದ ಪದಕಗಳನ್ನು, ಪದವಿ ಪ್ರಮಾಣಪತ್ರಗಳನ್ನು ಪಡೆದು ಅದೇ ಶಿಸ್ತುಭರಿತ ಸಂತಸದಿಂದ ವೇದಿಕೆಯಿಂದ ಕೆಳಗಿಳಿಯುತ್ತಿದ್ದರು. ಆ ವೇಳೆ ಸಭಿಕರಿಂದ ಕರತಾಡನ ಕೇಳಿ ಬರುತ್ತಿತ್ತು.

ತುಮಕೂರು ವಿಶ್ವವಿದ್ಯಾನಿಲಯದ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ ನಡೆದ 13ನೇ ಘಟಿಕೋತ್ಸವದ ನೋಟವಿದು.

ತಮ್ಮ ಓದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕ ಸಾರ್ಥಕ ಭಾವದಲ್ಲಿ ಸಾಧಕರಿದ್ದರು. ತಮ್ಮ ಸಾಧನೆಯನ್ನು ಅಭಿನಂದಿಸಲು ಬಂದವರಿಗೆ ನಗೆಯ ಉಡುಗೊರೆ ನೀಡುತ್ತಿದ್ದರು. ಮುಂದಿನ ಗುರಿಯ ಕನಸುಗಳನ್ನು ಹಂಚಿಕೊಳ್ಳುತ್ತಿದ್ದರು.

ADVERTISEMENT

ಶೈಕ್ಷಣಿಕ ಸಾಧಕರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಇದೇ ಸಮಾರಂಭದಲ್ಲಿ ಶಿಕ್ಷಣ, ಸಾಮಾಜಿಕ ಸೇವೆ, ವಿಜ್ಞಾನಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಕುಣಿಗಲ್‌ನ ಸಿ.ಎನ್‌.ಮಂಚೇಗೌಡ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಮಾಣಿಕರಾವ್‌ ಎಂ.ಸಾಲುಂಖೆ ಅವರು ಘಟಿಕೋತ್ಸವ ಭಾಷಣದಲ್ಲಿ ಸಾಧಕರಾದ ಜೆ.ಕೆ.ರೋಲಿಂಗ್‌, ಸ್ಟೀವ್‌ ಜಾಬ್ಸ್‌, ಎ.ಪಿ.ಜೆ.ಅಬ್ದುಲ್‌ ಕಲಾಂ ಅವರ ಉಕ್ತಿಗಳನ್ನು ಉಲ್ಲೇಖಿಸುತ್ತ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಮಾಣಿಕರಾವ್‌ ಮಾತನಾಡುತ್ತ, ತಂತ್ರಜ್ಞಾನವು ವ್ಯವಹಾರ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸುತ್ತಿರುವ ‘ನಾಲ್ಕನೆಯ ಮಹಾಕ್ರಾಂತಿಯ’ ಕಾಲಘಟ್ಟದಲ್ಲಿ ನಾವಿದ್ದೇವೆ. ನವೋದ್ಯಮಗಳು ಬೆಳೆಯುತ್ತಿವೆ. ಕಂಪನಿಗಳು ಸಹ ಆವಿಷ್ಕಾರ ಮತ್ತು ನಾವೀನ್ಯತೆಗಳ ಹುಟುಕಾಟದಲ್ಲಿವೆ. ಈ ಬದಲಾವಣೆಯಿಂದ ನಿರುದ್ಯೋಗ ಹೆಚ್ಚುತ್ತಿದೆ. ಈ ಅನಿಶ್ಚಿತತೆ ನಡುವೆ ‘ರಿಸ್ಕ್‌’ ತೆಗೆದುಕೊಳ್ಳಲು ನಾವು ಸಿದ್ಧರಾಗಬೇಕು. ದೃತಿಗೆಡದೇ ಹೊಸ ಕೌಶಲಗಳನ್ನು ಗಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಪ್ಪುಗಳನ್ನು ತಿದ್ದಿಕೊಂಡು, ಮರೆಯಬೇಕು. ಹೊಸದನ್ನು ಕಲಿಯಬೇಕು. ‘ನಾವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ದುರ್ಬಲರು, ಆದರೆ, ನಾವು ಊಹಿಸುವುದಕ್ಕಿಂತಲೂ ನಾವು ಬಲಿಷ್ಠರು’ ಎಂಬ ಮಾತಿದೆ. ಪರಿಶ್ರಮವಹಿಸಿ ಕೆಲಸ ಮಾಡಿ, ನಮ್ಮ ಜೀವನ ರೂಪಿಸಿಕೊಂಡು, ದೇಶವನ್ನು ಕಟ್ಟೋಣ ಎಂದು ಸಲಹೆ ನೀಡಿದರು.

ಹೊಸ ಶಿಕ್ಷಣ ನೀತಿ ಅಳವಡಿಕೆಗೆ ಉತ್ಸುಕ: ಕುಲಪತಿ ವೈ.ಎಸ್‌.ಸಿದ್ದೇಗೌಡ ಅವರು ಮಾತನಾಡುತ್ತ, ವಿದ್ಯಾರ್ಥಿ ಸಮೂಹದಿಂದ ಸಲಹೆ, ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ಮತ್ತು ಔದ್ಯೋಗಿಕ ಕ್ಷೇತ್ರದ ಅಗತ್ಯತೆಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯದಲ್ಲಿನ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲಾಗುತ್ತಿದೆ. ಅದಕ್ಕಾಗಿ ಸರ್ಕಾರ ಮತ್ತು ಕಾರ್ಪೋರೆಟ್‌ ಸಾಮಾಜಿಕ ಜವಾಬ್ದಾರಿಯಡಿಯ ಅನುದಾನಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ(ನ್ಯಾಕ್‌)ಎರಡನೇ ಆವೃತ್ತಿಯಲ್ಲಿ ಉತ್ತಮ ಗ್ರೇಡ್‌ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯ ಅಂಶಗಳನ್ನು ಅಳವಡಿಸಿಕೊಳ್ಳಲು ಸಹ ಉತ್ಸಕರಾಗಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.