ADVERTISEMENT

ಕಸದಿಂದ ವಿದ್ಯುತ್ ಉತ್ಪಾದನೆ: ಪರಮೇಶ್ವರ

₹645 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:27 IST
Last Updated 8 ನವೆಂಬರ್ 2025, 6:27 IST
ತುಮಕೂರು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಿದ ಸಚಿವ ಜಿ.ಪರಮೇಶ್ವರ ಕಟ್ಟಡದ ಮಾದರಿ ವೀಕ್ಷಿಸಿದರು. ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಡಾ.ಎಂ.ಸಿ.ಸುಧಾಕರ್, ಬಿ.ವಿ.ಅಶ್ವಿಜ, ಜಿ.ಪ್ರಭು, ಶುಭ ಕಲ್ಯಾಣ್ ಇತರರು ಭಾಗವಹಿಸಿದ್ದರು
ತುಮಕೂರು ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಿದ ಸಚಿವ ಜಿ.ಪರಮೇಶ್ವರ ಕಟ್ಟಡದ ಮಾದರಿ ವೀಕ್ಷಿಸಿದರು. ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ, ಡಾ.ಎಂ.ಸಿ.ಸುಧಾಕರ್, ಬಿ.ವಿ.ಅಶ್ವಿಜ, ಜಿ.ಪ್ರಭು, ಶುಭ ಕಲ್ಯಾಣ್ ಇತರರು ಭಾಗವಹಿಸಿದ್ದರು   

ತುಮಕೂರು: ನಗರದಲ್ಲಿ ಸಂಗ್ರಹವಾಗುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ ಮಾಡುವ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಶುಕ್ರವಾರ ಹೊಸದಾಗಿ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ನಿರ್ಮಾಣಗೊಂಡಿರುವ ತುರ್ತು ತೀವ್ರ ನಿಗಾ ಘಟಕ, 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ, ₹22 ಕೋಟಿ ವೆಚ್ಚದ ನರ್ಸಿಂಗ್ ಕಾಲೇಜು– ಹಾಸ್ಟೆಲ್ ಕಟ್ಟಡ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಸದ ಸಮಸ್ಯೆ ನಿವಾರಿಸಲು ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕದ ಆರಂಭಿಸುವ ಅಗತ್ಯವಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬೇಡಿಕೆಗೆ ಸ್ಪಂದಿಸಿದ ಸಚಿವರು, ‘ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ಸಮಯದಲ್ಲಿ ಬಿಡದಿ ಬಳಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ ಮಾಡಿಸಿದ್ದೆ. ನಗರದಲ್ಲೂ ಕಸದ ಸಮಸ್ಯೆ ಗಮನಕ್ಕೆ ಬಂದಿದ್ದು, ವಿದ್ಯುತ್ ಘಟಕ ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ADVERTISEMENT

ಗ್ರೇಟರ್ ಬೆಂಗಳೂರು ಮಾದರಿಯಲ್ಲಿ ಗ್ರೇಟರ್ ತುಮಕೂರು ನಗರ ನಿರ್ಮಾಣ ಮಾಡುವ ಪ್ರಯತ್ನ ನಡೆದಿದೆ. ಅದಕ್ಕೆ ಸಂಬಂಧಿಸಿದ ಪ್ರಸ್ತಾವ ಸರ್ಕಾರದ ಮುಂದಿದೆ. ಕಳೆದ ಹಲವು ದಶಕಗಳಿಂದ ನಗರದಲ್ಲಿ ಬಡವರಿಗೆ ನಿವೇಶನ ವಿತರಿಸಲು ಸಾಧ್ಯವಾಗಿಲ್ಲ. ಮುಂದಿನ ಆರು ತಿಂಗಳಲ್ಲಿ 2 ಸಾವಿರ ನಿವೇಶನಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಬೈಪಾಸ್ ರಸ್ತೆ: ನಂದಿಹಳ್ಳಿ– ಮಲ್ಲಸಂದ್ರ– ವಸಂತನರಸಾಪುರ ಮಧ್ಯೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಈ ರಸ್ತೆ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದರು.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲವಾಗಿದೆ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಗರದಲ್ಲಿ ಇಂದು ನಿರ್ಮಾಣ ಮಾಡಿರುವ ಕಟ್ಟಡಗಳೂ ಸೇರಿದಂತೆ ಸುಮಾರು ₹645 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ನಗರಕ್ಕೆ ₹175 ಕೋಟಿ ಅನುದಾನ ಬಂದಿದೆ. ಇಷ್ಟೆಲ್ಲ ಅಭಿವೃದ್ಧಿಗೆ ಹಣ ನೀಡಿದ್ದು ಸರ್ಕಾರವಲ್ಲವೆ? ಎಂದು ಕೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ದಶಕಗಳೇ ಕಳೆದಿದ್ದರೂ ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕಾಗಿ ₹500 ಕೋಟಿ ವಿಶೇಷ ಅನುದಾನ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಸಚಿವ ಡಾ.ಎಂ.ಸಿ.ಸುಧಾಕರ್, ಪ್ರಮುಖರಾದ ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಬಿ.ಸುರೇಶ್‌ಗೌಡ, ಸಿ.ಬಿ.ಸುರೇಶ್‌ಬಾಬು, ಎಚ್.ವಿ.ವೆಂಕಟೇಶ್, ಚಂದ್ರಶೇಖರ್‌ಗೌಡ, ನಿಕೇತ್ ರಾಜ್, ಮಹೇಶ್, ದೀಪ ಚೋಳನ್, ಶುಭ ಕಲ್ಯಾಣ್, ಜಿ.ಪ್ರಭು, ಬಿ.ವಿ.ಅಶ್ವಿಜ, ಕೆ.ವಿ.ಅಶೋಕ್, ಡಾ.ಚಂದ್ರಶೇಖರ್, ಡಾ.ಅಸ್ಗರ್‌ಬೇಗ್ ಇತರರು ಉಪಸ್ಥಿತರಿದ್ದರು.

ಕೊರಟಗೆರೆ ಗುಬ್ಬಿ ತಿಪಟೂರು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹೊಸದಾಗಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ₹127 ಕೋಟಿ ಮಂಜೂರಾಗಿದೆ
ಜಿ.ಪರಮೇಶ್ವರ ಸಚಿವ

ಜ್ಯೋತಿಗೆ ಎಚ್ಚರಿಕೆ ಕೊಟ್ಟ ರಾಜಣ್ಣ!

ತುಮಕೂರು: ಸಚಿವ ಪರಮೇಶ್ವರ ನಗರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದು ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಶಾಸಕ ಕೆ.ಎನ್.ರಾಜಣ್ಣ ಸಲಹೆ ಮಾಡಿದರು. ಈ ಹಿಂದೆ ಮೀಸಲು ಕ್ಷೇತ್ರ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪರಮೇಶ್ವರ ಅವರಿಗೆ ಹೇಳಿದ್ದರು. ಪರಮೇಶ್ವರ ಅವರು ಕೊರಟಗೆರೆ ಕ್ಷೇತ್ರ ಬಿಟ್ಟು ನಗರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹದ ನಡುವೆ ರಾಜಣ್ಣ ಹೇಳಿಕೆ ಮಹತ್ವ ಪಡೆದುಕೊಂಡಿದೆ. ‘ನಗರಕ್ಕೆ ಸೀಮಿತವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿರುವುದಿಂದ ಜ್ಯೋತಿಗಣೇಶ್ ಹುಷಾರಾಗಿ ಇರಬೇಕಿದೆ’ ಎಂದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಪರಮೇಶ್ವರ ‘ರಾಜಣ್ಣ ಈ ರೀತಿ ಏಕೆ ವ್ಯಾಖ್ಯಾನ ಮಾಡಿದ್ದಾರೆ ಆ ರೀತಿ ಏಕೆ ಹೇಳಿದ್ದಾರೆ ಏಕೆ ಜ್ಯೋತಿಗಣೇಶ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆ ರೀತಿಯ ಆಲೋಚನೆ ಮಾಡಬೇಡಿ’ ಎಂದು ಹೇಳುವ ಮೂಲಕ ನಗರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.

ಮುಖ್ಯಮಂತ್ರಿ ಗೈರು

ಜಿಲ್ಲಾ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದರು. ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆಸ್ಪತ್ರೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕಿತ್ತು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ಬೆಂಗಳೂರಿನಲ್ಲಿ ನಿರಂತರವಾಗಿ ಸಭೆ ನಡೆಸಿದ ಕಾರಣಕ್ಕೆ ಜಿಲ್ಲೆಯ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.