ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ₹500 ಕೋಟಿ ವಿಶೇಷ ಅನುದಾನ ನೀಡುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಕಳೆದ ಹತ್ತು ವರ್ಷಗಳ ಹಿಂದೆ ಜನ ಸಂಖ್ಯೆ ಹಾಗೂ ನಗರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ₹200 ಕೋಟಿಯಿಂದ ₹300 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು, ಒಳಚಂರಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ದಶಕದ ಅವಧಿಯಲ್ಲಿ ನಗರದ ಜನ ಸಂಖ್ಯೆ ಹಾಗೂ ಮನೆಗಳ ನಿರ್ಮಾಣ ದುಪ್ಪಟ್ಟಾಗಿದೆ. ಎಲ್ಲರಿಗೂ ಸಮರ್ಪಕವಾಗಿ ಕುಡಿಯುವ ನೀರು, ಮೂಲ ಸೌಕರ್ಯ ಕಲ್ಪಿಸಲು ನೆರವು ನೀಡಬೇಕು’ ಎಂದು ಮನವಿ ಮಾಡಿದರು.
ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಹೊಸದಾಗಿ 15 ಮೇಲ್ಮಟ್ಟದ ಟ್ಯಾಂಕ್‌ಗಳನ್ನು ನಿರ್ಮಿಸಬೇಕಿದೆ. ಜಲಸಂಗ್ರಹಗಾರ, ಪೈಪ್‌ಲೈನ್ ನಿರ್ಮಾಣ ಮಾಡಬೇಕಿದೆ ಎಂದರು.
ಎರಡನೇ ಹಂತದ ಒಳಚರಂಡಿ ವ್ಯವಸ್ಥೆ ಕಾರ್ಯಗತಗೊಳಿಸಬೇಕಿದ್ದು, 51 ಬ್ಲಾಕ್ ಸ್ಪಾಟ್‌ಗಳು ಅಡ್ಡ ಬಂದಿವೆ. ಇಂತಹ ಸ್ಥಳಗಳಲ್ಲಿ ಭೂ ಸ್ವಾಧೀನ ಮಾಡಬೇಕಿದೆ. ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮಳೆ ಬಂದ ಸಮಯದಲ್ಲಿ ಮ್ಯಾನ್‌ಹೋಲ್‌ಗಳಲ್ಲಿ ಚರಂಡಿ ನೀರು ಉಕ್ಕುತ್ತಿದೆ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಮಳೆ ಬಂದ ಸಮಯದಲ್ಲಿ ತಗ್ಗು ಪ್ರದೇಶಗಳ ಮನೆಗಳಿಗೆ ಚರಂಡಿ ನೀರು ನುಗ್ಗಿ ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ಅನುದಾನ ನೀಡಿದರೆ ಸಮಸ್ಯೆ ಸರಿಪಡಿಸಬಹುದು ಎಂದು ಹೇಳಿದರು.
ನಗರದ ಮರಳೂರು ಗ್ರಾಮದ ಸರ್ವೆ ನಂ 87/2ರಲ್ಲಿ 2 ಎಕರೆ ಜಾಗವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ನೀಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
₹50 ಕೋಟಿಗೂ ಹೆಚ್ಚು ಬೆಲೆ ಬಾಳವ ಜಾಗವನ್ನು ಪಾಲಿಕೆಯಲ್ಲೇ ಉಳಿಸಿಕೊಂಡು, ಸಾರ್ವಜನಿಕರ ಕೆಲಸಕ್ಕೆ ಬಳಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.