ತುಮಕೂರು: ನಗರದ ಶಿರಾಗೇಟ್‌ನ ಐಡಿಎಸ್ಎಂಟಿ ಬಡಾವಣೆಯ ನಿವಾಸಿ ಲಕ್ಷ್ಮಮ್ಮ ನಿವೇಶನ ಕೊಡಿಸುವಂತೆ ಲೋಕಾಯುಕ್ತ ಎಸ್‌ಪಿ ವಲಿಬಾಷ ಕಾಲಿಗೆ ಬಿದ್ದು ಬೇಡಿಕೊಂಡರು.
ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಶುಕ್ರವಾರ ‘ತ್ವರಿತ ಸೇವಾ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ಪಾಲಿಕೆಯ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ನಂತರ ವಲಿಬಾಷ ತ್ವರಿತ ಸೇವಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿದ್ದ ಲಕ್ಷ್ಮಮ್ಮ ಅವರು ಎಸ್‌ಪಿ ಕಾಲಿಗೆ ಬಿದ್ದು, ತಮ್ಮ ದೂರು ಸಲ್ಲಿಸಿದರು. ನಿವೇಶನ ಕೊಡಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
‘ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳು ಒಂದು ವರ್ಷದ ಹಿಂದೆ ಮನೆ ತೆರವುಗೊಳಿಸಿದ್ದರು. ಮನೆ ತೆರವುಗೊಳಿಸಿದ ಬಳಿಕ ನಿವೇಶನ ನೀಡುವಂತೆ ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು. ಒಂದು ವರ್ಷದಿಂದ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಮ್ಮ ದೂರಿಗೆ ಸ್ಪಂದಿಸುತ್ತಿಲ್ಲ. 30 ವರ್ಷಗಳಿಂದ ವಾಸವಿದ್ದ ಜಾಗದಲ್ಲಿ ಕಟ್ಟಿದ ಮನೆ ತೆರವುಗೊಳಿಸಲಾಗಿದೆ’ ಎಂದು ಅಳಲು ತೋಡಿಕೊಂಡರು.
ಸಾರ್ವಜನಿಕರು ತ್ವರಿತ ಸೇವಾ ಅಭಿಯಾನದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ನಮೂನೆ-2, 3ರಲ್ಲಿ ಆಸ್ತಿ ಅಳತೆಯ ಅದಲು–ಬದಲು, ತಿದ್ದುಪಡಿ, ಅನಧಿಕೃತ ಯುಜಿಡಿ, ನೀರು ಸಂಪರ್ಕ ಅಧಿಕೃತಗೊಳಿಸುವ ಅರ್ಜಿ ಸ್ವೀಕರಿಸಲಾಯಿತು. ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.