ತುಮಕೂರು: ಮಹಿಳೆಯೊಬ್ಬರು ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಚಾಲಕ ಹಿಂದಿರುಗಿಸಿದ್ದಾರೆ. ಚಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ಹನುಮಂತಪುರದ ರವಿಕುಮಾರ್ ಆಟೊ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅರಸೀಕೆರೆ ತಾಲ್ಲೂಕಿನ ಗಾಯತ್ರಿ ಎಂಬುವರು ನಗರ ಹೊರವಲಯದ ಕುಂದೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ಸೀಮಂತ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವರೆಗೆ ರವಿಕುಮಾರ್ ಆಟೊದಲ್ಲಿ ತೆರಳಿದ್ದರು.
ಇಳಿಯುವ ಆತುರದಲ್ಲಿ ಬ್ಯಾಗ್ ಮರೆತು ಆಟೊದಲ್ಲೇ ಬಿಟ್ಟು ಹೋಗಿದ್ದರು. ವಾಪಸ್ ಬಂದು ನೋಡಿದಾಗ ಆಟೊ ಇರಲಿಲ್ಲ. ಸುತ್ತಮುತ್ತ ವಿಚಾರಿಸಿ, ಹುಡುಕಾಡಿದರೂ ಆಟೊ ಪತ್ತೆಯಾಗಲಿಲ್ಲ. ನಂತರ ನಗರ ಠಾಣೆಯಲ್ಲಿ ದೂರು ನೀಡಲು ಹೋಗಿದ್ದರು. ಅಷ್ಟರಲ್ಲಿ ರವಿಕುಮಾರ್ ಪೊಲೀಸರಿಗೆ ಬ್ಯಾಗ್ ತಲುಪಿಸಲು ಠಾಣೆಗೆ ಬಂದಿದ್ದರು.
ಸುಮಾರು ₹4 ಲಕ್ಷ ಮೌಲ್ಯದ 52 ಗ್ರಾಂ ಚಿನ್ನಾಭರಣ ಇದ್ದ ಬ್ಯಾಗ್ ಗಾಯತ್ರಿ ಅವರಿಗೆ ವಾಪಸ್ ನೀಡಿದರು. ಕಳೆದು ಹೋದ ಬಂಗಾರದ ಆಭರಣ ಸಿಕ್ಕಿದ್ದಕ್ಕೆ ಗಾಯತ್ರಿ ಧನ್ಯವಾದ ತಿಳಿಸಿದರು. ರವಿಕುಮಾರ್ ಕಾರ್ಯಕ್ಕೆ ಪೊಲೀಸರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.