ADVERTISEMENT

ಕೊರಟಗೆರೆ ಬಳಿ ಬಸ್‌ ಪಲ್ಟಿ : ಐವರ ಸಾವು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 16:08 IST
Last Updated 30 ಅಕ್ಟೋಬರ್ 2019, 16:08 IST
ಪಲ್ಟಿಯಾದ ಬಸ್‌ನಲ್ಲಿ ಸಿಲುಕಿದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದರು
ಪಲ್ಟಿಯಾದ ಬಸ್‌ನಲ್ಲಿ ಸಿಲುಕಿದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದರು   

ತುಮಕೂರು: ಮಧುಗಿರಿಯಿಂದ ತುಮಕೂರಿಗೆ ಹೊರಟಿದ್ದ ಖಾಸಗಿ ಬಸ್ಸು ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರದಲ್ಲಿ ಬುಧವಾರ ಬೆಳಿಗ್ಗೆ ಪಲ್ಟಿಯಾಗಿ ಸ್ಥಳದಲ್ಲಿಯೇ ಐವರು ಮೃತಪಟ್ಟರು. ತೀವ್ರ ಸ್ವರೂಪದ ಗಾಯಗಳಾಗಿರುವ 16 ಮಂದಿ ಸೇರಿ ಒಟ್ಟು 34 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಜಿಲ್ಲೆಯ ವಿವಿಧ ಹಳ್ಳಿಗಳ ನಿವಾಸಿಗಳಾದ ಶ್ರೀನಿವಾಸ್‌ (40), ಅಕ್ರಂ ಪಾಷ (28), ಶಿವಕುಮಾರ್‌ (27), ಇಮ್ರಾನ್‌ (20), ಸಾದತ್‌ (18) ಮೃತರು. ಗಾಯಗೊಂಡವರು ಕೊರಟಗೆರೆ ತಾಲ್ಲೂಕು ಆಸ್ಪತ್ರೆ ಮತ್ತು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸು ಕೊರಟಗೆರೆಯಿಂದ ಸುಮಾರು 4 ಕಿ.ಮೀ. ದೂರವಿರುವ ಅಗ್ರಹಾರಕ್ಕೆ 8.50ಕ್ಕೆ ಬಂದಾಗ ಈ ದುರ್ಘಟನೆ ಸಂಭವಿಸಿದೆ.ಬಸ್‌ನ ಸೀಟುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನ ಒಳಗಡೆ ನಿಂತು ಸಹ ಪ್ರಯಾಣಿಸುತ್ತಿದ್ದರು. ಪಾವಗಡ– ತುಮಕೂರು ರಾಜ್ಯ ಹೆದ್ದಾರಿಯ ಅಗ್ರಹಾರವನ್ನು ಬಸ್ಸು ಪ್ರವೇಶ ಮಾಡಿದಾಗ, ಮುಂದೆ ಹೋಗುತ್ತಿದ್ದ ಆಟೊಗೆ ಬಸ್ಸು ಗುದ್ದುವ ಸಂಭವವಿತ್ತು. ಅದನ್ನು ತಪ್ಪಿಸಲು ಚಾಲಕ ಎಡ–ಬಲಕ್ಕೆ ಬಸ್ಸನ್ನು ತಿರುಗಿಸಿದ. ನಿಯಂತ್ರಣ ತಪ್ಪಿ ಬಸ್ಸು ರಪ್ಪನೆ ಎಡಕ್ಕೆ ಉರುಳಿ ಬಿತ್ತು. ಅದರಡಿ ಸಿಲುಕಿದವರು ಮೃತಪಟ್ಟರು ಎಂದು ಪ್ರಯಾಣಿಕರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.

ADVERTISEMENT

ಬಸ್ಸು ಶ್ರೀವಿಜಯಲಕ್ಷ್ಮೀ ಟ್ರಾವೆಲ್ಸ್‌ಗೆ ಸೇರಿದೆ. ಅವಘಡ ಸಂಭವಿಸುತ್ತಿದ್ದಂತೆ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಟ್ರಾವೆಲ್ಸ್‌ ಮಾಲೀಕ, ಚಾಲಕ, ನಿರ್ವಾಹಕರನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಐಜಿಪಿ ಶರತ್ ಚಂದ್ರ ತಿಳಿಸಿದರು.

ನ.1ರಂದು ಸಂಪುಟ ಸಭೆ ಇದೆ. ಮೃತರ ಕುಟುಂಬಕ್ಕೆ ಎಷ್ಟು ಪರಿಹಾರ ಕೊಡಬೇಕು ಎಂದು ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದುತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.