ತುಮಕೂರು: ಜಿಲ್ಲೆಯಲ್ಲಿ ಜಾತಿವಾರು ಸಮೀಕ್ಷೆ ಶೇ 70ರಷ್ಟು ಪೂರ್ಣಗೊಂಡಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಜಿ.ಎನ್.ಶ್ರೀಕಂಠಯ್ಯ ಹೇಳಿದರು.
ನಗರದ ಯಲ್ಲಾಪುರ, ಅಂತರಸನಹಳ್ಳಿಯಲ್ಲಿ ನಡೆಯುತ್ತಿರುವ ಸಮೀಕ್ಷಾ ಕಾರ್ಯದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಒಟ್ಟು 7,55,483 ಮನೆಗಳಿದ್ದು, ಈಗಾಗಲೇ 5,23,091 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಮನೆಗಳ ಸಮೀಕ್ಷೆ ಕಾರ್ಯವನ್ನು ಅ. 7ರ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸಮೀಕ್ಷೆ ವೇಳೆ ಸಣ್ಣಪುಟ್ಟ ಅಡೆತಡೆಗಳು ಎದುರಾದರೂ ಅಧಿಕಾರಿಗಳು ಹಾಗೂ ಸಮೀಕ್ಷೆದಾರರು ಅದನ್ನು ಸಮರ್ಥವಾಗಿ ಎದುರಿಸಿ ಸಮೀಕ್ಷೆ ಮುನ್ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಜನರಿಗೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ? ಇಲ್ಲವೆ? ಎಂಬುದನ್ನು ತಿಳಿಯಲು ಈ ಸಮೀಕ್ಷಾ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸಮೀಕ್ಷೆಯ ಸಮಗ್ರ ದತ್ತಾಂಶ ಮುಂದಿನ 20 ವರ್ಷಗಳಿಂದ 30 ವರ್ಷಗಳ ವರೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಣ್ಣ ಆಶಾಪುರ್, ಇತರ ಅಧಿಕಾರಿಗಳು
ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.