ADVERTISEMENT

ತುಮಕೂರು: ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ 2 ಎಕರೆ; ಕಾಂಗ್ರೆಸ್‌– ಬಿಜೆಪಿ ಜಟಾಪಟಿ

ಕಾಂಗ್ರೆಸ್‌ ಹೆಸರಿಗೆ ಜಾಗ ನೋಂದಣಿ ವಿವಾದ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:52 IST
Last Updated 14 ಆಗಸ್ಟ್ 2025, 7:52 IST
   

ತುಮಕೂರು: ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ಜಟಾಪಟಿ ನಡೆಯಿತು. ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ನೋಂದಣಿ ವಿಚಾರ ಗಲಾಟೆ, ಗದ್ದಲಕ್ಕೆ ಕಾರಣವಾಯಿತು.

ಬಿಜೆಪಿ ಮುಖಂಡರ ವಿರೋಧದ ಮಧ್ಯೆ ಕಾಂಗ್ರೆಸ್‌ ಭವನ ಟ್ರಸ್ಟ್‌ ಹೆಸರಿಗೆ ಜಾಗ ನೋಂದಣಿ ಮಾಡಿಕೊಡಲಾಯಿತು.

ನಗರದ ಮರಳೂರು ಸರ್ವೆ ನಂಬರ್‌ 87/2ರಲ್ಲಿ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಿ ಸರ್ಕಾರ ಮಂಜೂರಾತಿ ಪತ್ರ ನೀಡಿತ್ತು. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಅದರಂತೆ ಜಾಗ ನೋಂದಣಿ ಮಾಡಿಸಲು ಕಾಂಗ್ರೆಸ್‌ ನಾಯಕರು ಬುಧವಾರ ಉಪನೋಂದಣಾಧಿಕಾರಿ ಕಚೇರಿಗೆ ಬಂದಿದ್ದರು.

ADVERTISEMENT

ಈ ಮಾಹಿತಿ ತಿಳಿದ ಬಿಜೆಪಿ ನಾಯಕರು ಕಚೇರಿಗೆ ಮುತ್ತಿಗೆ ಹಾಕಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌, ನಗರ ಅಧ್ಯಕ್ಷ ಕೆ.ಧನುಶ್‌, ಮುಖಂಡರಾದ ನವಚೇತನ್‌, ಹನುಮಂತರಾಜು ಅವರನ್ನು ಪೊಲೀಸರು ಕಚೇರಿಯಿಂದ ಹೊರಗಡೆ ಕಳುಹಿಸಿದರು. ನಂತರ ಕಾಂಗ್ರೆಸ್‌ ಮುಖಂಡರ ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ ಹಾಗೂ ಬಿಜೆಪಿ ಮುಖಂಡರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು. ಇದರಿಂದ ಕಚೇರಿ ಬಳಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.

‘ಕಾಂಗ್ರೆಸ್‌ಗೆ ನೀಡಿರುವ ಜಾಗ ರೈತ ಸತೀಶ್‌ ಎಂಬುವರಿಗೆ ಸೇರಿದ್ದು, ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಕಳೆದ 15 ವರ್ಷದಿಂದ ಜಾಗದ ವಿಚಾರವಾಗಿ ವಾದ– ಪ್ರತಿವಾದ ನಡೆಯುತ್ತಿದೆ. ಇದರ ಮಧ್ಯೆ ಸದರಿ ಜಾಗಕ್ಕೆ ಅನಧಿಕೃತವಾಗಿ ಇ–ಖಾತೆ ಸೃಷ್ಟಿಸಿ, ನೋಂದಣಿಗೆ ಮುಂದಾಗಿದ್ದಾರೆ’ ಎಂದು ಎಚ್‌.ಎಸ್‌.ರವಿಶಂಕರ್‌ ಆರೋಪಿಸಿದರು.

ಘಟನೆ ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಕಾನೂನು ಬಾಹಿರವಾಗಿ ನೋಂದಣಿಗೆ ಕೈಹಾಕಿದ್ದಾರೆ. ಕಂದಾಯ ಜಾಗವನ್ನು ಕಾಂಗ್ರೆಸ್‌ ಪಡೆದುಕೊಂಡಿದೆ. ಕಾನೂನು ಹೋರಾಟ ಮುಂದುವರಿಸಲಾಗುವುದು’ ಎಂದರು.

ಬಿಜೆಪಿ ಮುಖಂಡರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಜಾಗ ನೀಡಬಾರದು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.