ತುಮಕೂರು: ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಕೊನೆ ಹಂತದಲ್ಲಿ ಚುರುಕು ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ ಶೇ 93ರಷ್ಟು ಪೂರ್ಣಗೊಂಡಿದೆ. ಉಳಿದ ಮೂರು ದಿನಗಳಲ್ಲಿ ಶೇ 98ರಷ್ಟು ಗುರಿ ಸಾಧನೆ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಜಾತಿವಾರು ಸಮೀಕ್ಷೆ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದರೆ, ನಗರ ಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಅದರಲ್ಲೂ ತುಮಕೂರು ನಗರದಲ್ಲಿ ಶೇ 90ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಕೊನೆಯ ಮೂರು ದಿನಗಳಲ್ಲಿ ಇನ್ನುಳಿದ ಶೇ 10ರಷ್ಟು ಗುರಿ ಸಾಧಿಸುವುದು ಕಷ್ಟಕರ ಎಂದೇ ಹೇಳಲಾಗುತ್ತಿದೆ.
ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಜಾತಿವಾರು ಸಮೀಕ್ಷೆಯಲ್ಲಿ ಮೊದಲ (ಶೇ 93.18) ಸ್ಥಾನದಲ್ಲಿ ಇದ್ದರೆ, ಜಿಲ್ಲೆ ಎರಡನೇ (ಶೇ 93) ಸ್ಥಾನದಲ್ಲಿ ಇದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಮೀಕ್ಷೆ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಸಮೀಕ್ಷೆ ತಡವಾಗಿ ಆರಂಭವಾದರೂ ಉತ್ತಮ ಸಾಧನೆ ಮಾಡಿದೆ. ಆರಂಭದಲ್ಲಿ ಜಿಲ್ಲಾ ಆಡಳಿತ ದಸರಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸೆ. 22ರಂದು ನಮ್ಮಲ್ಲಿ ಸಮೀಕ್ಷೆ ಆರಂಭವೇ ಆಗಿರಲಿಲ್ಲ. ಸಮೀಕ್ಷೆದಾರರಿಗೆ ಸರಿಯಾಗಿ ತರಬೇತಿಯನ್ನೇ ನೀಡಿರಲಿಲ್ಲ. ನಂತರ ಪ್ರಾರಂಭವಾದರೂ ತಾಂತ್ರಿಕ ಸಮಸ್ಯೆಗಳಿಂದ ಮುಂದೆ ಸಾಗಿರಲಿಲ್ಲ. ಕೊನೆಗೂ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡ ಶಿಕ್ಷಕರು ಸಮೀಕ್ಷೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 7,96,669 ಮನೆಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಈವರೆಗೆ 7,14,848 ಮನೆಗಳನ್ನು ಸಮೀಕ್ಷೆದಾರರು ತಲುಪಿದ್ದಾರೆ. ಒಟ್ಟು 28,16,759 ಜನರಿಂದ ಮಾಹಿತಿ ಸಂಗ್ರಹಿಸಬೇಕಿದ್ದು, ಈವರೆಗೆ 26,19,495 ಮಂದಿಯಿಂದ ಮಾಹಿತಿ ಕಲೆಹಾಕಿ ದಾಖಲಿಸಲಾಗಿದೆ. ಇನ್ನೂ ಬಾಕಿ ಉಳಿದವರಿಗಾಗಿ ಸಮೀಕ್ಷಕರು ಶೋಧ ನಡೆಸಿದ್ದಾರೆ.
ಗುಬ್ಬಿ ತಾಲ್ಲೂಕಿನಲ್ಲಿ ಅತಿ ಹೆಚ್ಚು (ಶೇ 95.96) ಸಮೀಕ್ಷೆ ಮಾಡಲಾಗಿದ್ದು, ತಿಪಟೂರು ತಾಲ್ಲೂಕು ಎರಡನೇ (ಶೇ 95.8) ಸ್ಥಾನದಲ್ಲಿ ಇದೆ. ಪಾವಗಡ ತಾಲ್ಲೂಕಿನಲ್ಲಿ ಅತಿ ಕಡಿಮೆ ಶೇ 84.97ರಷ್ಟು ಗುರಿ ಮುಟ್ಟಲಾಗಿದೆ. ಮಧುಗಿರಿ ತಾಲ್ಲೂಕಿನಲ್ಲೂ ಅಂತಹುದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಶೇ 89.45ರಷ್ಟು ಪ್ರಗತಿಯಾಗಿದೆ.
ಉತ್ತಮ ಸಾಧನೆ
ಜಾತಿವಾರು ಸಮೀಕ್ಷೆ ಸರಿಯಾದ ದಿಕ್ಕಿನಲ್ಲಿ ಸಾಗಿದ್ದು ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಈವರೆಗೆ ಶೇ 93ರಷ್ಟು ಗುರಿ ಮುಟ್ಟಲಾಗಿದೆ. ಉಳಿದಿರುವ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದ್ದು ಶೇ 97ರಿಂದ 98ರಷ್ಟು ಸಾಧನೆ ಸಾಧ್ಯವಾಗಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಣ್ಣ ಆಶಾಪುರ್ ತಿಳಿಸಿದರು. ರಾಜ್ಯದಲ್ಲೇ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದ್ದು ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಮನೆಗಳನ್ನು ತಲುಪಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.