ADVERTISEMENT

ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 5:47 IST
Last Updated 10 ಜನವರಿ 2020, 5:47 IST
ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.   

ತುಮಕೂರು: ಸದಾ ಬಂದೋಬಸ್ತ್, ಮಟ್ಕಾ, ಹಲ್ಲೆ, ಹತ್ಯೆ, ಕಳ್ಳತನ, ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ, ಸುಲಿಗೆ, ವಂಚನೆ ಪ್ರಕರಣಗಳ ತನಿಖೆಯಲ್ಲಿ ಮುಳುಗಿ ಹೋಗಿದ್ದ ಜಿಲ್ಲಾ ಪೊಲೀಸರು ಇಂದು ರಿಲ್ಯಾಕ್ಸ್ ಮೂಡಿನಲ್ಲಿದ್ದರು.

ಹೌದು, ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿನ ಡಿಎಆರ್ ಮೈದಾನದಲ್ಲಿ ಶುಕ್ರವಾರ ಆರಂಭವಾದ ವಾರ್ಷಿಕ ಕ್ರೀಡಾಕೂಟ ಪೊಲೀಸರ ಹರ್ಷಕ್ಕೆ ಕಾರಣವಾಯಿತು.

ಸದಾ ಕಾರ್ಯದೊತ್ತಡದಲ್ಲೆ ದಿನಗಳನ್ನು ನೂಕುತ್ತಿದ್ದ ಪೊಲೀಸ್ ಸಿಬ್ಬಂದಿ ಇಂದು ಗೂಡುಬಿಟ್ಟ ಹಕ್ಕಿಯಂತಾದರು. ವಿವಿಧ ಬಣ್ಣದ ಕ್ರೀಡಾ ಪೋಷಾಕು ತೊಟ್ಟು ಮೈದಾನಕ್ಕಿಳಿದು, ಆಟವಾಡುತ್ತಾ, ಅತ್ತಿಂದಿತ್ತ ಓಡಾಡುತ್ತಾ, ಹುರಿದುಂಬಿಸುತ್ತಾ ಖುಷಿ ಪಟ್ಟರು.

ADVERTISEMENT

ಅನೇಕರು ತಮ್ಮಲ್ಲಿದ್ದ ಕ್ರೀಡಾ ಪ್ರತಿಭೆಯನ್ನು ಹೊರಹಾಕಿ ಅನೇಕರ ಪ್ರಶಂಸೆಗೆ ಪಾತ್ರವಾದರು. ಈ ಮೂಲಕ ಅವಕಾಶ ಸಿಕ್ಕರೇ ನಾವು ಏನಾನ್ನಾದರೂ ಸಾಧಿಸಿ ತೋರಿಸಬಲ್ಲೆವು ಎಂಬುದನ್ಬು ಸಾಬೀತುಪಡಿಸಿದರು. ಕೆಲವು ಸಿಬ್ಬಂದಿಯ ಆಟ, ಪಟ್ಟು, ಚುರುಕುತನ ನೋಡುಗರ ಗಮನ ಸೆಳೆಯಿತು.

ಇದಕ್ಕೂ ಮುನ್ನ ಬೆಂಗಳೂರು ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, 'ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡಾಮನೋಭಾವದಿಂದ ಭಾಗವಹಿಸಬೇಕು. ಕ್ರೀಡೆಗಳು ಕೇವಲ ವರ್ಷಕ್ಕೊಮ್ಮೆ ಸೀಮಿತವಾಗಿರಬಾರದು. ಸಿಬ್ಬಂದಿಯ ದೈನಂದಿನ ಜೀವನದ ಭಾಗವಾಗಬೇಕು. ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಇಲ್ಲದಿದ್ದರೆ ಒತ್ತಡ ನಿಭಾಯಿಸುವುದು ಕಷ್ಟ. ಹಾಗಾಗಿ ಕ್ರೀಡೆ, ವ್ಯಾಯಾಮ, ಯೋಗ, ವಾಕಿಂಗ್ ಮತ್ತಿತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು' ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪೊಲೀಸರಿಂದ ಪಥಸಂಚಲನ ನಡೆಯಿತು. ಶರತ್‌ಚಂದ್ರ ಕ್ರೀಡಾಜ್ಯೋತಿ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.