ADVERTISEMENT

ತುಮಕೂರು: ಆಸ್ತಿ ದಾಖಲೆ ಕಳೆದ ಬ್ಯಾಂಕ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:48 IST
Last Updated 15 ಅಕ್ಟೋಬರ್ 2025, 6:48 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ತುಮಕೂರು: ಸಾಲ ಪಡೆದುಕೊಂಡ ಸಮಯದಲ್ಲಿ ನೀಡಿದ್ದ ಆಸ್ತಿಯ ಮೂಲ ದಾಖಲೆಗಳನ್ನು ಕಳೆದು ಹಾಕಿರುವ ಕೆನರಾ ಬ್ಯಾಂಕ್‌ಗೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ನಗರದ ಬಟವಾಡಿಯ ಮಹಾಲಕ್ಷ್ಮಿ ಬಡಾವಣೆಯ ಎಚ್.ಸುಮಾ ಹಾಗೂ ರಂಗಸ್ವಾಮಿ ದಂಪತಿಗೆ ₹1.60 ಲಕ್ಷ ಪರಿಹಾರ, ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ ₹25 ಸಾವಿರ, ನ್ಯಾಯಾಲಯದ ವೆಚ್ಚವಾಗಿ ₹10 ಸಾವಿರ ನೀಡುವಂತೆ ಅಶೋಕ ನಗರದ ಕೆನರಾ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

ಶಾಲಾ ಶಿಕ್ಷಕಿಯಾಗಿದ್ದ ಸುಮಾ, ಪ್ರಾಂಶುಪಾಲ ರಂಗಸ್ವಾಮಿ ಮನೆ ನಿರ್ಮಾಣಕ್ಕೆ 24–11–2021ರಂದು ಕೆನರಾ ಬ್ಯಾಂಕ್‌ ಅಶೋಕ ನಗರ ಶಾಖೆಯಿಂದ ₹20 ಲಕ್ಷ ಸಾಲ ಪಡೆದುಕೊಂಡಿದ್ದರು. ಆ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿದ್ದರು. ಸಾಲ ತೀರಿಸಿದ ನಂತರ ಆಸ್ತಿಯ ಮೂಲ ದಾಖಲೆಗಳನ್ನು ಹಿಂದಿರುಗಿಸುವಂತೆ ದಂಪತಿ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಆ ಸಮಯದಲ್ಲಿ ದಾಖಲೆಗಳು ಕಳೆದು ಹೋಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ಶಾಖೆಯ ಕಚೇರಿ ಸ್ಥಳಾಂತರಿಸುವ ಸಮಯದಲ್ಲಿ ದಾಖಲೆಗಳು ಕಳೆದು ಹೋಗಿವೆ ಎಂದು ಬ್ಯಾಂಕ್ ಸಮಜಾಯಿಸಿ ನೀಡಿತ್ತು.

ADVERTISEMENT

ದಾಖಲೆಗಳು ಕಳೆದು ಹೋಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ದೂರು ದಾಖಲಿಸಿತ್ತು. ಪತ್ರಿಕೆಯಲ್ಲೂ ಪ್ರಕಟಣೆ ನೀಡಿತ್ತು. ಆಸ್ತಿ ₹1 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ. ಆಸ್ತಿಯ ಮೂಲ ದಾಖಲೆಗಳು ಇಲ್ಲದೆ ಮುಂದಿನ ದಿನಗಳಲ್ಲಿ ವ್ಯವಹರಿಸುವುದು ಕಷ್ಟಕರವಾಗುತ್ತದೆ. ಸಾಲ ಸೌಲಭ್ಯ ಸಿಗುವುದಿಲ್ಲ. ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆಸ್ತಿಯ ಮೌಲ್ಯ ಸಹ ತಗ್ಗಲಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ದಾಖಲೆಗಳು ಕಳೆದುಹೋದ ಸಮಯದಲ್ಲಿ ಆರ್‌ಬಿಐ ನಿಯಮಾನುಸಾರ ₹2.60 ಲಕ್ಷ ಪರಿಹಾರ ನೀಡಲು ಬ್ಯಾಂಕ್ ಮುಂದಾಗಿತ್ತು. ಇಷ್ಟು ಹಣವನ್ನು ಗ್ರಾಹಕರ ಹೆಸರಿನಲ್ಲಿ ಠೇವಣಿ ಇರಿಸಲಾಗಿತ್ತು. ಇದಕ್ಕೆ ಗ್ರಾಹಕರೂ ಸಹ ಒಪ್ಪಿಕೊಂಡಿದ್ದರು. ಕಳೆದು ಹೋಗಿರುವ ದಾಖಲೆಗಳ ಪ್ರಮಾಣಿಕೃತ ಪ್ರತಿ (ಸರ್ಟಿಫೈಡ್ ಕಾಪಿ) ನೀಡುವಂತೆ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಸಾಕಷ್ಟು ಸಲ ಮನವಿ ಮಾಡಿದ್ದರೂ ದಾಖಲೆಗಳ ಪ್ರಮಾಣಿಕೃತ ಪ್ರತಿಗಳನ್ನು ನೀಡಿರಲಿಲ್ಲ. ಇದರಿಂದ ಬೇಸತ್ತು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.

ಆಯೋಗದ ವಿಚಾರಣೆ ಸಮಯದಲ್ಲಿ ದಾಖಲೆಗಳು ಕಳೆದು ಹೋಗಿರುವುದು ಹಾಗೂ ಪರಿಹಾರ ನೀಡಲು ಸಿದ್ಧವಿರುವುದನ್ನು ಬ್ಯಾಂಕ್ ಒಪ್ಪಿಕೊಂಡಿತ್ತು. ದಾಖಲೆಗಳ ಪ್ರಮಾಣಿಕೃತ ಪ್ರತಿಗಳನ್ನು ನೀಡುತ್ತಿದ್ದರೂ ಗ್ರಾಹಕರು ಸ್ವೀಕರಿಸುತ್ತಿಲ್ಲ ಎಂದು ಹೇಳಿತು. ಸಕಾಲದಲ್ಲಿ ಸರ್ಟಿಫೈಡ್ ಕಾಪಿ ಕೊಡಲಿಲ್ಲ. ನಮ್ಮ ಮನವಿಗೆ ಬ್ಯಾಂಕ್ ಸ್ಪಂದಿಸಿಲ್ಲ. ಸೇವಾ ಲೋಪಕ್ಕಾಗಿ ₹25 ಲಕ್ಷ ಪರಿಹಾರ ಕೊಡಿಸಬೇಕು ಎಂದು ಗ್ರಾಹಕರು ಮನವಿ ಮಾಡಿದರು.

ವಾದ– ಪ್ರತಿವಾದ ಆಲಿಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಪರಿಹಾರಕ್ಕೆ ಆದೇಶಿಸಿದೆ. ದೂರುದಾರರ ಪರವಾಗಿ ವಕೀಲ ಡಿ.ಕಂಬೇಗೌಡ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.