ತುಮಕೂರು: ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೇ 30ರಂದು ನಗರದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ.
ಕಾಶ್ಮೀರದ ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ‘ಆಪರೇಷನ್ ಸಿಂಧೂರ’ ನಡೆಸಲಾಗಿತ್ತು. ಈ ಸಾಧನೆಯ ವಿಜಯೋತ್ಸವವನ್ನು ದೇಶದಲ್ಲೇ ಮೊದಲ ಬಾರಿಗೆ ನಗರದಲ್ಲಿ ಆಚರಿಸಲಾಗುತ್ತಿದೆ ಎಂದು ವಿಜಯೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಸೊಗಡು ಶಿವಣ್ಣ ಇಲ್ಲಿ ಗುರುವಾರ ತಿಳಿಸಿದರು.
ವಿದ್ಯಾರ್ಥಿ, ಯುವಜನರಿಗೆ ದೇಶದ ರಕ್ಷಣಾ ಸಂಸ್ಥೆಯ ಕಾರ್ಯತಂತ್ರ ತಿಳಿಸುವುದು. ದೇಶದ ಭದ್ರತೆ, ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶವಾಗಿದೆ. ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಾಸಕ ಬಿ.ಸುರೇಶ್‍ಗೌಡ, ‘ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೆಹಲ್ಗಾಮ್‍ನಲ್ಲಿ ದಾಳಿ ಮಾಡಿದ ಭಯೋತ್ಪಾದಕರು ಧರ್ಮ ಕೇಳಿ, ಕಲ್ಮಾ ಪಠಿಸಲು ಹೇಳಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಗುಂಡಿಕ್ಕಿ ಹತ್ಯೆ ಮಾಡಿದ ಕೃತ್ಯವನ್ನು ಯಾವ ಭಾರತೀಯನಿಗೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.
ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಜಿ.ಪರಮೇಶ್ವರ, ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಮಂಜುನಾಥ್ ಇತರರು ಭಾಗವಹಿಸಲಿದ್ದಾರೆ ಎಂದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಮಾಜಿ ನಿರ್ದೇಶಕ ಪ್ರಹ್ಲಾದ್ ರಾಮ್‍ರಾವ್, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್, ಎಸ್.ಸೋಮನಾಥ್ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಆಶಾ ಪ್ರಸನ್ನಕುಮಾರ್, ಡಾ.ಎಸ್.ಪರಮೇಶ್, ಸಂಪಿಗೆ ಜಗದೀಶ್, ಎಂ.ಬಿ.ನಂದೀಶ್, ಪ್ರಭಾಕರ್, ಜಿ.ಎಸ್.ಶಿವಕುಮಾರ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.