ತುಮಕೂರು: ಕಳೆದ ಹದಿನೈದು ದಿನಗಳಿಂದ ಮರೆಯಾಗಿದ್ದ ಮಳೆ ಸೋಮವಾರ ನಗರದಲ್ಲಿ ಮತ್ತೆ ಸುರಿಯಿತು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಳೆ ಬಿತ್ತು. ಬಿಸಿಲಿನಿಂದ ಬಸವಳಿದವರಿಗೆ ತಂಪೆರೆಯಿತು.
ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ವರುಣ ಕೃಪೆ ತೋರಿದ್ದಾನೆ. ನಿರಂತರವಾಗಿ ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಅಂತರಸನಹಳ್ಳಿ ಕೆಳ ಸೇತುವೆ ಬಳಿ ನೀರು ನಿಂತು, ವಾಹನ ಸವಾರರು ರಸ್ತೆ ದಾಟಲು ಪರದಾಡಿದರು.
ಸರಿಯಾಗಿ ಶಾಲಾ–ಕಾಲೇಜು, ಸರ್ಕಾರಿ ಕಚೇರಿ ಕೆಲಸದ ಅವಧಿ ಮುಗಿಯುವ ಹೊತ್ತಿಗೆ ಮಳೆ ಶುರುವಾಯಿತು. ಶಾಲೆ ಮಕ್ಕಳು, ನೌಕರರು ಮಳೆಯಲ್ಲಿ ನೆನೆಯುತ್ತಾ ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನೂ ಕೆಲವರು ಕೊಡೆಯ ಆಶ್ರಯ ಪಡೆದಿದ್ದರು.
ಜಿಲ್ಲೆಯಾದ್ಯಂತ ಸೆಪ್ಟೆಂಬರ್ ಪ್ರಾರಂಭದಿಂದ ಹೆಚ್ಚಿನ ಮಳೆಯಾಗಿಲ್ಲ. ಒಂದೆರಡು ಹನಿ ಉದುರಿ ಮೋಡಗಳು ಮರೆಯಾಗುತ್ತಿವೆ. ಮಳೆ ಕೈಕೊಟ್ಟಿದ್ದರಿಂದ ರಾಗಿ ಪೈರು ಬಾಡುತ್ತಿದೆ. ಚಿಕ್ಕನಾಯಕನಹಳ್ಳಿ, ಶಿರಾ, ಗುಬ್ಬಿ, ತಿಪಟೂರು, ತುರುವೇಕೆರೆ, ಕುಣಿಗಲ್ ಭಾಗದಲ್ಲಿ ಮಳೆ ಇಲ್ಲದೆ ರಾಗಿ ಬೆಳೆ ಒಣಗುತ್ತಿದೆ. ಇದುವರೆಗೆ ಯಾವುದೇ ಕಡೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ರಾಗಿ, ಶೇಂಗಾ, ನವಣೆ, ಸಾಮೆ ಬಿತ್ತನೆ ಮಾಡಿದ ರೈತರು ಆಕಾಶದ ಕಡೆ ಮುಖ ಮಾಡಿ ಕೂತಿದ್ದಾರೆ.
ಮಧುಗಿರಿ, ಶಿರಾ, ಗುಬ್ಬಿ, ತಿಪಟೂರು, ಕೊರಟಗೆರೆ, ಚಿಕ್ಕನಾಯಕನಹಳ್ಳಿ ವ್ಯಾಪ್ತಿಯಲ್ಲಿ ಮಳೆಯೇ ಇಲ್ಲವಾಗಿದೆ. ಜಿಲ್ಲೆಯಲ್ಲಿ ಸೆ. 1ರಿಂದ 15ರ ವರೆಗೆ 59 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಾಗಿತ್ತು. ಆದರೆ 27 ಮಿಲಿ ಮೀಟರ್ ಮಾತ್ರ ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ ಮಳೆಯಾಗದ ಕಾರಣ ಬಿತ್ತನೆ ತಡವಾಗಿತ್ತು. ಆಗಸ್ಟ್‌ನಲ್ಲಿ ಬಿದ್ದ ಮಳೆ ರೈತರಲ್ಲಿ ತುಸು ಭರವಸೆ ಮೂಡಿಸಿತ್ತು. ಸೆಪ್ಟೆಂಬರ್ ಅರ್ಧ ತಿಂಗಳು ಮುಗಿದರೂ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ.
ಮುಂಗಾರು ಆರಂಭದಲ್ಲಿಯೇ ಮಳೆ ಕೊರತೆಯಾಗಿತ್ತು. ಆಗಾಗ ಸುರಿದ ಸೋನೆ ಮಳೆಗೆ ರೈತರು ಜಮೀನು ಸಿದ್ಧಪಡಿಸಿ ಬಿತ್ತನೆಗೆ ಅಣಿಗೊಳಿಸಿದ್ದರು. ಆಗಸ್ಟ್‌ನಲ್ಲಿ ರಾಗಿ ಬಿತ್ತನೆ ಕಾರ್ಯ ಚುರುಕು ಪಡೆದಿತ್ತು. ಬೀಜ ಬಿತ್ತಿದ ನಂತರ ವರುಣನ ಸಿಂಚನವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.