ತುಮಕೂರು: ಜಿಲ್ಲಾ ಆಡಳಿತ ‘ತುಮಕೂರು ದಸರಾ’ ಆಚರಣೆಗೆ ಸಿದ್ಧತೆ ಕೈಗೊಂಡಿದ್ದು, ಈ ಬಾರಿ ಪಂಜಿನ ಕವಾಯತು ನಡೆಸಲು ತೀರ್ಮಾನಿಸಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕವಾಯತು ಪೂರ್ವಭಾವಿಯಾಗಿ ಪ್ರತಿ ದಿನ ಅಭ್ಯಾಸ ನಡೆಯುತ್ತಿದ್ದು, ಫುಟ್‌ಬಾಲ್ ಅಂಗಣ ಸೇರಿ ಇಡೀ ಕ್ರೀಡಾಂಗಣ ಹಾಳಾಗಿದೆ.
ಕಳೆದ ಮೂರು ದಿನಗಳಿಂದ ಕ್ರೀಡಾಂಗಣದಲ್ಲಿ ಪಂಜಿನ ಕವಾಯತು ಮೆರವಣಿಗೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಪೊಲೀಸರು ಒಳಗೊಂಡಂತೆ ಒಟ್ಟು 250ಕ್ಕೂ ಹೆಚ್ಚು ಮಂದಿ ಪೂರ್ವಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮೂರೇ ದಿನಕ್ಕೆ ಫುಟ್‌ಬಾಲ್ ಅಂಗಣ ಹಾಳಾಗಿದೆ. ಇಲ್ಲಿನ ಹುಲ್ಲುಹಾಸು ಮತ್ತೆ ಚಿಗುರಲು ಅಸಾಧ್ಯ ಎಂಬಷ್ಟರ ಮಟ್ಟಿಗೆ ಹಾಳು ಮಾಡಲಾಗಿದೆ. ಮತ್ತೆ ಸರಿಪಡಿಸಲಾರದಷ್ಟು ಹಾಳಾಗಿದೆ.
ಪಂಜಿನ ಕವಾಯತು ಪೂರ್ವಭಾವಿ ಅಭ್ಯಾಸಕ್ಕೆ ಸೀಮೆಎಣ್ಣೆ ಬಳಸುತ್ತಿದ್ದು, ಅದರ ಬೆಂಕಿಯ ಕಿಡಿಯಿಂದ ಹುಲ್ಲು ಸುಟ್ಟಿದೆ. ಸೀಮೆ ಎಣ್ಣೆ ಹುಲ್ಲು ಹಾಸಿನ ಮೇಲೆ ಬಿದ್ದು ಅದು ಒಣಗಲಾರಂಭಿಸಿದೆ. ಹಲವು ವರ್ಷಗಳಿಂದ ಬೆಳೆಸಿದ್ದ ಹಸಿರು ಹುಲ್ಲು ಮರೆಯಾಗುತ್ತಿದೆ.
ಹಿಂದಿನ ವರ್ಷ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು 1 ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ‘ತುಮಕೂರು’ ಎಂಬ ಕನ್ನಡ ಪದದ ಕಲಾಕೃತಿ ರಚಿಸಲಾಗಿತ್ತು. ಇದರ ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ 1.35 ಲಕ್ಷ ಬಾಟಲಿಗಳಲ್ಲಿ ‘ನಮ್ಮ ಸಂವಿಧಾನ’ ಎಂಬ ಕಲಾಕೃತಿ ರಚಿಸಿದ್ದರು. ಇದಕ್ಕಾಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫುಟ್‌ಬಾಲ್ ಅಂಗಣ ಬಳಸಿದ್ದರು.
ಈ ಸಮಯದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ನಿರ್ಬಂಧ ವಿಧಿಸಲಾಗಿತ್ತು. ವಾಹನ ಪಾರ್ಕಿಂಗ್ ಸ್ಥಳದಲ್ಲಿ ಅಭ್ಯಾಸ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲಾಕೃತಿ ರಚನೆಯಿಂದ ಫುಟ್‌ಬಾಲ್ ಅಂಗಣ ಹಸಿರು ಒಣಗಿತ್ತು. ಈಗಷ್ಟೇ ಎಲ್ಲ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲಿ ಜಿಲ್ಲಾ ಆಡಳಿತ ಮತ್ತೆ ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದೆ.
‘ಪಂಜಿನ ಕವಾಯತು ಅಭ್ಯಾಸದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮೈದಾನದ ಸಿಂಥೆಟಿಕ್ ಟ್ರ್ಯಾಕ್‌ಗೆ ಹಾನಿಯಾಗುತ್ತದೆ. ಟ್ರ್ಯಾಕ್ ಮೇಲೆ ರೆಡ್ ಕಾರ್ಪೆಟ್ ಹಾಸಿದ್ದರೂ ನಿರ್ವಹಣೆ ಸರಿಯಾಗಿಲ್ಲ. ಜೋರಾದ ಗಾಳಿ ಬೀಸಿದರೆ ಟ್ರ್ಯಾಕ್‌ಗೆ ಬೆಂಕಿ ಹಚ್ಚಿಕೊಳ್ಳುವ ಸಂಭವ ಇರುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕ್ರೀಡಾಂಗಣ ಇಂತಹ ಕೆಲಸಗಳಿಂದ ಹಾಳಾಗುತ್ತಿದೆ. ಕ್ರೀಡಾಂಗಣ ಕ್ರೀಡೆಗಳ ಆಯೋಜನೆಗೆ ಬಿಟ್ಟು ಎಲ್ಲ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಪಂಜಿನ ಕವಾಯತಿಗೆ ಜೂನಿಯರ್ ಕಾಲೇಜು ಮೈದಾನವನ್ನೇ ಬಳಿಸಿಕೊಂಡಿದ್ದರೆ ಕ್ರೀಡಾಂಗಣ ಹಾಳಾಗುವುದು ತಪ್ಪಿತಿತ್ತು’ ಎಂದು ಹಿರಿಯ ಕ್ರೀಡಾಪಟು ಅಸಮಾಧಾನ ವ್ಯಕ್ತಪಡಿಸಿದರು.
‘ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಅಭ್ಯಾಸ ನಡೆಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಕಾರ್ಯಗಳಿಗೆ ನಿಯಂತ್ರಣ ಹೇರಿ, ಕ್ರೀಡಾಪಟುಗಳ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಬೇಕು’ ಎಂದು ಕ್ರೀಡಾ ತರಬೇತುದಾರರೊಬ್ಬರು ಒತ್ತಾಯಿಸಿದರು.
ಸ್ವಚ್ಛತೆಗಿಲ್ಲ ಆದ್ಯತೆ:
ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸುತ್ತದೆ. ತಾಲ್ಲೂಕು ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ನಡೆದ ಸಮಯದಲ್ಲಿ ಮಾತ್ರ ಮಹಾನಗರ ಪಾಲಿಕೆ ಕಾರ್ಮಿಕರು ಕ್ರೀಡಾಂಗಣ ಸ್ವಚ್ಛಗೊಳಿಸುತ್ತಾರೆ. ನಂತರ ಯಾರೊಬ್ಬರೂ ಈ ಕಡೆ ತಿರುಗಿಯೂ ನೋಡುವುದಿಲ್ಲ. ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನೇಮಿಸಿಲ್ಲ. ಕೇವಲ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಭದ್ರತೆ ಸ್ವಚ್ಛತೆ ಫುಟ್‌ಬಾಲ್ ಅಂಗಣಕ್ಕೆ ನೀರು ಬಿಡುವುದು ಸೇರಿ ಎಲ್ಲ ಕೆಲಸ ಇವರೊಬ್ಬರೇ ಮಾಡಬೇಕಿದೆ. ‘ರಾಷ್ಟ್ರೀಯ ಹಬ್ಬಗಳ ಆಚರಣೆ ಇತರೆ ಕಾರ್ಯಕ್ರಮದ ಸಮಯದಲ್ಲಿ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಇಡೀ ಜಿಲ್ಲಾ ಆಡಳಿತ ಕ್ರೀಡಾಂಗಣದಲ್ಲಿ ಮೊಕ್ಕಂ ಹೂಡುತ್ತದೆ. ಇದಾದ ಬಳಿಕ ಇಲ್ಲಿನ ಪರಿಸ್ಥಿತಿ ಏನು ಎಂಬುವುದನ್ನು ಕೇಳುವುದಿಲ್ಲ. ಕ್ರೀಡಾಂಗಣದ ಕಟ್ಟಡದಲ್ಲಿ ಸಚಿವ ಜಿ.ಪರಮೇಶ್ವರ ಅವರ ಕಚೇರಿಯೂ ಇದೆ. ಇದು ಕೇವಲ ನಾಮಕಾವಸ್ತೆಯಾಗಿದೆ. ಅವರು ಕ್ರೀಡಾಪಟುಗಳ ಸಮಸ್ಯೆ ಕೇಳುವುದಿಲ್ಲ’ ಎಂಬುದು ಕ್ರೀಡಾಪಟುಗಳ ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.