ತುಮಕೂರು: ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವಿವಿಧೋದ್ದೇಶ ವ್ಯಾಯಾಮ ಶಾಲೆಯಲ್ಲಿ (ಜಿಮ್) ಓಬಿರಾಯನ ಕಾಲದ ಪರಿಕರ ಬಳಸಲಾಗುತ್ತಿದೆ. ಸರ್ಕಾರ ಹೊಸದಾಗಿ ಅಗತ್ಯ ಪರಿಕರ ಸರಬರಾಜು ಮಾಡಿದರೂ ಜಿಮ್‌ನಲ್ಲಿ ಅಳವಡಿಸಲು ಕ್ರೀಡಾ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ.
ವ್ಯಾಯಾಮ ಶಾಲೆಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ. ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಗೆ ಹೊಂದಿಕೊಂಡಂತೆ ಇರುವ ಜಿಮ್ ನಿರ್ವಹಣೆಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಇಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಹೊಸ ಶೌಚಾಲಯಕ್ಕೂ ಬೀಗ ಹಾಕಿದ್ದು, ಇಲ್ಲಿಗೆ ಬರುವವರು ಪಡಿಪಾಟಲು ಅನುಭವಿಸುತ್ತಿದ್ದಾರೆ.
ಜಾವೆಲಿನ್, ಅಥ್ಲೆಟಿಕ್ಸ್ ಒಳಗೊಂಡಂತೆ ಇತರೆ ಕ್ರೀಡೆಗಳಲ್ಲಿ ಸಾಧನೆಯ ಕನಸು ಕಂಡ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಜಿಮ್, ಕ್ರೀಡಾಂಗಣವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಅವರಿಗೆ ಬೇಕಾದ ಪರಿಕರಗಳು ಮಾತ್ರ ಸಿಗುತ್ತಿಲ್ಲ. ಜಿಮ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯಗೊಳಿಸಿಲ್ಲ. ಕ್ರೀಡಾಂಗಣದಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ.
ಪ್ರತಿ ನಿತ್ಯ ನೂರಕ್ಕೂ ಹೆಚ್ಚು ಜನ ದೇಹ ದಂಡಿಸುತ್ತಾರೆ. ಪರಿಕರದ ಕೊರತೆಯಿಂದಾಗಿ ಒಬ್ಬರು ಅಭ್ಯಾಸದಲ್ಲಿ ತೊಡಗಿದ್ದರೆ ಮತ್ತೊಬ್ಬರು ನಿಂತು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ಇಲಾಖೆಯಿಂದ ಹೊಸ ಪರಿಕರ ಸರಬರಾಜು ಆಗಿ ಹಲವು ತಿಂಗಳು ಕಳೆದರೂ ಇನ್ನೂ ಜಿಮ್‌ಗೆ ಸೇರಿಲ್ಲ. ಕ್ರೀಡಾಂಗಣದ ಕಟ್ಟಡದಲ್ಲಿಯೇ ದೂಳು ಹಿಡಿಯುತ್ತಿವೆ. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಒಮ್ಮೆಯೂ ಜಿಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸೌಲಭ್ಯದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಕ್ರೀಡಾಂಗಣದ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಯೇ ಹೀಗಾದರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಕ್ರೀಡಾಪಟು ಒಬ್ಬರು ಬೇಸರ ವ್ಯಕ್ತಪಡಿಸಿದರು.
ಬಳಕೆಯಾಗದ ಫುಟ್‌ಬಾಲ್ ಅಂಗಣ: ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ₹62 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗಿದೆ. ಹೈಟೆಕ್ ಫುಟ್‌ಬಾಲ್ ಅಂಗಣ ನಿರ್ಮಿಸಲಾಗಿದೆ. ಆದರೆ, ಇದುವರೆಗೆ ಒಂದೇ ಒಂದು ಫುಟ್‌ಬಾಲ್ ಪಂದ್ಯಾವಳಿಯೂ ಇಲ್ಲಿ ನಡೆದಿಲ್ಲ. ತರಬೇತುದಾರರ ಕೊರೆತೆಯಿಂದ ಇದು ಸಾಧ್ಯವಾಗಿಲ್ಲ. ಸುಸಜ್ಜಿತ ಅಂಗಣ ಇದ್ದರೂ ಯಾರ ಪ್ರಯೋಜನಕ್ಕೂ ಬಾರದಂತಾಗಿದೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸಮಯದಲ್ಲಿ ಕವಾಯತು ನಡೆಸಲು, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಮಾತ್ರ ಬಳಕೆಯಾಗುತ್ತಿದೆ. ಫುಟ್‌ಬಾಲ್ ಅಂಗಣ ನಿರ್ಮಾಣದ ಉದ್ದೇಶವೇ ಈಡೇರುತ್ತಿಲ್ಲ. ಈ ಹಿಂದೆ ಗಿನ್ನಿಸ್ ದಾಖಲೆಗಾಗಿ ಪ್ಲಾಸ್ಟಿಕ್ ಬಾಟಲಿಗಳಿಂದ ಕಲಾಕೃತಿ ರಚಿಸಲು ಕ್ರೀಡಾಂಗಣ ಬಳಸಲಾಗಿತ್ತು. ಇದರಿಂದ ಹಸಿ ಹುಲ್ಲು ಒಣಗಿ ಫುಟ್‌ಬಾಲ್ ಅಂಗಣ ಅಧ್ವಾನ ಆಗಿತ್ತು. ಅಂದಿನಿಂದ ಇವತ್ತಿನ ತನಕ ಮತ್ತೆ ಮೊದಲಿನ ಸ್ಥಿತಿಗೆ ಬಂದಿಲ್ಲ.
ಇಲಾಖೆಯಿಂದ ಅಗತ್ಯ ಪರಿಕರಗಳು ಬಂದಿವೆ. ಶೀಘ್ರವೇ ಜಿಮ್‌ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು-ರೋಹಿತ್ ಗಂಗಾಧರ್, ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.