ADVERTISEMENT

ಪಾರ್ಟ್‌ಟೈಮ್‌ ಕೆಲಸದ ಆಮಿಷ: ವಿದ್ಯಾರ್ಥಿ, ಮಹಿಳೆಗೆ ₹18 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:01 IST
Last Updated 27 ಸೆಪ್ಟೆಂಬರ್ 2025, 2:01 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ಮಹಿಳೆ ಹಾಗೂ ವಿದ್ಯಾರ್ಥಿ ₹18.44 ಲಕ್ಷ ಕಳೆದುಕೊಂಡಿದ್ದಾರೆ.

ತೋವಿನಕೆರೆ ಸಿ.ದಿಲೀಪ್ ನಂಬರ್‌ UNIQLO Z217 ಎಂಬ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿದ್ದಾರೆ. ನಂತರ uniqlo-wearhub.com ವೆಬ್‌ಸೈಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾರೆ. ದಿಲೀಪ್‌ ಸದರಿ ವೆಬ್‌ಸೈಟ್‌ ಲಿಂಕ್‌ನಲ್ಲಿ ಬ್ಯಾಂಕ್‌ ವಿವರ ಸೇರಿ ಅಗತ್ಯ ದಾಖಲೆ ಸಲ್ಲಿಸಿದ್ದಾರೆ.

ಮೊದಲಿಗೆ ಬೋನಸ್‌ ಎಂದು ₹1,291 ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇದಾದ ಬಳಿಕ ₹10 ಸಾವಿರ ಹೂಡಿಕೆ ಮಾಡಿದ್ದು, ಬೋನಸ್‌ ಸೇರಿ ₹15,601 ವಾಪಸ್‌ ಹಾಕಿದ್ದಾರೆ. ಇದೇ ರೀತಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಮಾತಿಗೆ ಮರುಳಾಗಿ ಹಂತ ಹಂತವಾಗಿ ಒಟ್ಟು ₹11,20,220 ವರ್ಗಾವಣೆ ಮಾಡಿದ್ದಾರೆ.

ADVERTISEMENT

ಹೂಡಿಕೆ ಹಣದಲ್ಲಿ ₹71,839 ವಾಪಸ್‌ ಬಂದಿದೆ. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಬಹುದು ಎಂದು ವಂಚಿಸಿ ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಹಿಳೆಗೆ ₹7.95 ಲಕ್ಷ ಮೋಸ: ಇನ್‌ಸ್ಟಾಗ್ರಾಮ್‌ನಲ್ಲಿ ವರ್ಕ್‌ಫ್ರಮ್‌ ಹೋಮ್‌ ಮಾಹಿತಿ ಇರುವ ಲಿಂಕ್‌ ಕ್ಲಿಕ್‌ ಮಾಡಿದ ತಾಲ್ಲೂಕಿನ ಹಾಲುಗೊಂಡನಹಳ್ಳಿಯ ಅನುಷಾ ₹7,95,492 ಮೋಸ ಹೋಗಿದ್ದಾರೆ.

ಟೆಲಿಗ್ರಾಮ್‌ ಮೂಲಕ ಲಿಂಕ್‌ ಕಳುಹಿಸಿ ಗೂಗಲ್‌ನಲ್ಲಿ ಹೋಟೆಲ್‌ ಗುರುತಿಸುವಂತೆ ಸೂಚಿಸಿದ್ದಾರೆ. ಅನುಷಾ ಅದರಂತೆ ಮಾಡಿದಾಗ ಅವರ ಖಾತೆಗೆ ₹180 ಹಣ ಹಾಕಿದ್ದಾರೆ. 20 ಟಾಸ್ಕ್‌ ಪೂರ್ಣಗೊಳಿಸಿದ ತರುವಾಯ ಮತ್ತೆ ₹200 ನೀಡಿದ್ದಾರೆ. ಹೇಳಿದ ಎಲ್ಲ ಟಾಸ್ಕ್‌ ಮುಗಿಸಿದ ನಂತರ ₹6,290 ವರ್ಗಾಯಿಸಿದ್ದಾರೆ. ಇದರ ನಂತರ ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ.

ಸೈಬರ್‌ ವಂಚಕರ ಮಾತು ನಂಬಿದ ಅನುಷಾ ಹಂತ ಹಂತವಾಗಿ ₹8,01,782 ಹಣವನ್ನು ವಿವಿಧ ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ. ವಿತ್‌ ಡ್ರಾ ಮಾಡಿಕೊಳ್ಳಲು ವಿಚಾರಿಸಿದಾಗ ‘ನಿಮ್ಮ ಖಾತೆ ಲಾಕ್‌ ಆಗಿದ್ದು, ಇನ್ನೂ ₹5 ಲಕ್ಷ ಹೂಡಿಕೆ ಮಾಡಿದರೆ ₹17.89 ಲಕ್ಷ ಒಟ್ಟಿಗೆ ಪಡೆಯಬಹುದು’ ಎಂದು ಆರೋಪಿ ಟೆಲಿಗ್ರಾಮ್‌ ಗ್ರೂಪ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೋಸ ಹೋದ ವಿಷಯ ಅರಿವಿಗೆ ಬಂದ ನಂತರ ಅನುಷಾ ಸೈಬರ್‌ ಠಾಣೆ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.