ADVERTISEMENT

ತುಮಕೂರು ವಿವಿಯಿಂದ ಆನ್‍ಲೈನ್ ತರಗತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 14:24 IST
Last Updated 8 ಏಪ್ರಿಲ್ 2020, 14:24 IST
ಪ್ರೊ.ವೈ.ಎಸ್.ಸಿದ್ದೇಗೌಡ
ಪ್ರೊ.ವೈ.ಎಸ್.ಸಿದ್ದೇಗೌಡ   

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಅಧ್ಯಾಪಕರು ಆನ್‍ಲೈನ್ ಬೋಧನೆಯಲ್ಲಿ ತೊಡಗುವ ಮೂಲಕ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಆಗದಂತೆ ಪ್ರಯತ್ನಿಸುತ್ತಿದ್ದಾರೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದ್ದಾರೆ.

‘ಲಾಕ್‍ಡೌನ್ ಅವಧಿಯಲ್ಲಿ ಇಲ್ಲಿಯವರೆಗೆ ವಿಶ್ವವಿದ್ಯಾಲಯದ 25 ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಒಟ್ಟು 1,584 ಅವಧಿಗಳಷ್ಟು ಆನ್‍ಲೈನ್ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಜೂಮ್ ಆ್ಯಪ್, ಯೂಟ್ಯೂಬ್, ಗೂಗಲ್ ಡ್ರೈವ್, ವಾಟ್ಸ್‌ಆ್ಯಪ್‌ ಬಳಸಿ ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ’ ಎಂದಿದ್ದಾರೆ.

ಅಧ್ಯಾಪಕರು ತಮ್ಮ ಮನೆಗಳಿಂದಲೇ ವಿದ್ಯಾರ್ಥಿಗಳಿಗೆ ಮೊದಲೇ ಸಮಯ ನಿಗದಿ ಮಾಡಿಕೊಂಡು ಪಾಠ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ (ಎಲ್‍ಎಂಎಸ್) ವಿವಿಧ ವಿಷಯಗಳಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಉಪನ್ಯಾಸಗಳನ್ನು ವಿಡಿಯೊ ಚಿತ್ರೀಕರಣ ಮಾಡಿ ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಉಪನ್ಯಾಸ ಆಲಿಸಬಹುದು. ಪಾಠಗಳ ಆಡಿಯೊ ರೆಕಾರ್ಡ್‌ಗಳನ್ನು ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗುಂಪು ರಚಿಸಿ ಕಳುಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಆಡಿಯೊ ಪಾಠಗಳನ್ನು ತಮ್ಮ ಅನುಕೂಲದ ಸಮಯದಲ್ಲಿ, ಅನುಕೂಲದ ಸ್ಥಳದಲ್ಲಿ ಕುಳಿತು ಕೇಳಿ ನೋಟ್ಸ್ ಮಾಡಿಕೊಳ್ಳಬಹುದು. ಮತ್ತೆ ಮತ್ತೆ ಕೇಳಿ ಪುನರ್ಮನನ ಮಾಡಿಕೊಳ್ಳಲೂಬಹುದು. ಆನ್‍ಲೈನ್ ಕಲಿಕೆಯ ಮಾದರಿ ವಿಶ್ವವಿದ್ಯಾಲಯದಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ಬರುತ್ತಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.