ADVERTISEMENT

ತುಮುಲ್ ನೂತನ ಅಧ್ಯಕ್ಷರಾಗಿ ಸಿ.ವಿ.ಮಹಾಲಿಂಗಪ್ಪ ಆಯ್ಕೆ

ಕೊನೆಗೂ ತೆರೆ ಬಿದ್ದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಚುನಾವಣೆ ಕುತೂಹಲ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:50 IST
Last Updated 14 ಡಿಸೆಂಬರ್ 2018, 14:50 IST
ಸಿ.ವಿ.ಮಹಾಲಿಂಗಯ್ಯ
ಸಿ.ವಿ.ಮಹಾಲಿಂಗಯ್ಯ   

ತುಮಕೂರು: ಜಿದ್ದಾಜಿದ್ದಿಗೆ ಕಾರಣವಾಗಿ ಕುತೂಹಲ ಕೆರಳಿಸಿದ್ದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತುರುವೇಕೆರೆ ತಾಲ್ಲೂಕಿನ ಚೆಂಡೂರುಪುರದ ಸಿ.ವಿ.ಮಹಾಲಿಂಗಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ 10 ತಾಲ್ಲೂಕುಗಳಿಂದ ತಲಾ ಒಬ್ಬರಂತೆ 10 ಜನ ನಿರ್ದೇಸಕರು ಹಾಗೂ 4 ಜನ ಅಧಿಕಾರಿಗಳನ್ನು ಒಳಗೊಂಡ 14 ಮತದಾರರನ್ನು ಹೊಂದಿದ್ದು, 9 ಮತಗಳನ್ನು ಪಡೆದ ಸಿ.ವಿ.ಮಹಾಲಿಂಗಪ್ಪ ನೂತನ ಅಧ್ಯಕ್ಷರಾಗಿ ಹೊರಹೊಮ್ಮಿದರು. ಪ್ರತಿಸ್ಪರ್ಧಿ ಕುಣಿಗಲ್‌ನ ಡಿ.ಕೃಷ್ಣಕುಮಾರ್ ಅವರು 5 ಮತಗಳನ್ನು ಪಡೆದರು.

ಮಧ್ಯಾಹ್ನ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿತು. ಅಧ್ಯಕ್ಷ ಸ್ಥಾನಕ್ಕೆ ಸಿ.ವಿ.ಮಹಾಲಿಂಗಪ್ಪ ಮತ್ತು ಡಿ.ಕೃಷ್ಣಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂದಕ್ಕೆ ಪಡೆಯುವ ನಿಗದಿಪಡಿಸಿದ್ದ ಅವಧಿ ಮುಗಿದಾಗ ಯಾರೂ ನಾಮಪತ್ರ ಹಿಂದಕ್ಕೆ ಪಡೆದಿರಲಿಲ್ಲ. ಹೀಗಾಗಿ, ಚುನಾವಣೆ ನಡೆಸಲಾಯಿತು.

ADVERTISEMENT

10 ತಾಲ್ಲೂಕುಗಳ ಚುನಾಯಿತ ನಿರ್ದೇಶಕರಲ್ಲದೇ ಸಹಕಾರ ಇಲಾಖೆಯ ಜಂಟಿ ಉಪನಿಬಂಧಕರು, ಕೆ.ಎಂ.ಎಫ್‌ ಪ್ರತಿನಿಧಿ, ಪಶು ಸಂಗೋಪನಾ ಇಲಾಖೆ, ಸಹಕಾರ ಇಲಾಖೆ ಉಪನಿರ್ದೇಶಕರು ಹಾಗೂ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಅಬ್ದುಲ್ ರಜಾಜ್ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಉಪನಿಬಂಧಕ ಜಿ.ಆರ್.ವಿಜಯಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಮುನೇಗೌಡ ಕಾರ್ಯನಿರ್ವಹಿಸಿದರು.

ಎರಡು ಬಾರಿ ಮುಂದೂಡಿಕೆಯಾಗಿತ್ತು: ನ.17ರಂದು ನಡೆಯಬೇಕಿದ್ದ ಅಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನವೆಂಬರ್ 13ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ನಂತರ ನ.17ಕ್ಕೆ ಚುನಾವಣೆಯನ್ನು ಸಹಕಾರ ಚುನಾವಣಾ ಪ್ರಾಧಿಕಾರ ಆಯುಕ್ತರು ಮುಂದೂಡಿದ್ದರು.

ನಿಯಮಾವಳಿ ಪ್ರಕಾರ ಚುನಾವಣೆಗೆ 7 ದಿನ ಮುಂಗಡವಾಗಿ ಸಂಬಂಧಪಟ್ಡ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ, ಮನಸೋ ಇಚ್ಛೆ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಹೀಗಾಗಿ, ನ.17ರಂದು ನಡೆಯಲಿರುವ ಚುನಾವಣೆಗೆ ತಡೆ ನೀಡಲು ಕೋರಿ ತುಮುಲ್ ನಿರ್ದೇಶಕ ರೇಣುಕಾಪ್ರಸಾದ್ ನ.14ರಂದು ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ.17ರಂದು ನಡೆಯಬೇಕಿದ್ದ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಬಳಿಕ ವಿಚಾರಣೆ ನಡೆದ ಬಳಿಕ ಡಿಸೆಂಬರ್ 14ರಂದು ಚುನಾವಣೆ ನಿಗದಿಗೊಂಡಿತ್ತು.

ಚುನಾವಣೆ ಮುಂದೂಡಿಕೆ ಬಗ್ಗೆ ಚುನಾವಣಾಧಿಕಾರಿಗಳು ಸದಸ್ಯರಿಗೆ ಮುಂಗಡವಾಗಿ ಮಾಹಿತಿ ನೀಡಿಲ್ಲ. ಅಲ್ಲದೇ, ಯಾವ ಕಾರಣಕ್ಕೂ ಚುನಾವಣೆ ಮುಂದೂಡಲಾಗಿದೆ ಎಂಬುದನ್ನು ಉಲ್ಲೇಖಿಸಿರಲಿಲ್ಲ. ನಿಯಮಬಾಹಿರವಾಗಿದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.