ADVERTISEMENT

ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ: ಸಚಿವ ಉಮೇಶ್ ಕತ್ತಿ

ಅನ್ಯಾಯವಾದರೆ ಪ್ರತ್ಯೇಕ ರಾಜ್ಯದ ಕೂಗು

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 10:07 IST
Last Updated 22 ಜನವರಿ 2021, 10:07 IST
ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಉಮೇಶ್ ಕತ್ತಿ
ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಉಮೇಶ್ ಕತ್ತಿ   

ತುಮಕೂರು: ‘ನಾನು ಎಂಟು ಸಲ ಶಾಸಕನಾಗಿದ್ದೇನೆ. ಜೀವನದಲ್ಲಿ ಮುಖ್ಯಮಂತ್ರಿ ಆಗುವ ಆಸೆ ಎಲ್ಲ ಶಾಸಕರಿಗೂ ಇರುತ್ತದೆ. ಆ ಪ್ರಕಾರ ನನಗೂ ಸಿ.ಎಂ ಆಗುವ ಆಸೆ ಇದೆ. ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಂದಿನ ದಿನಗಳಲ್ಲಿ ನೋಡೋಣ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದರು.

ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬಸನಗೌಡ ಪಾಟೀಲ ಯತ್ನಾಳ್ ನನ್ನ ಆತ್ಮೀಯ ಮಿತ್ರರು. ಅವರ ವಯಸ್ಸು 57. ನನ್ನ ವಯಸ್ಸು 60. ಪಕ್ಷದಲ್ಲಿ ನಾನು ಯತ್ನಾಳ್ ಅವರಿಗಿಂತ ಹಿರಿಯನಿದ್ದೇನೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಲು ಗರಿಷ್ಠ ವಯೋಮಿತಿ 75 ವರ್ಷವಿದೆ. ಮುಖ್ಯಮಂತ್ರಿ ಬದಲಾವಣೆ ಮತ್ತು ನಾವು ಮುಖ್ಯಮಂತ್ರಿಯಾಗುವ ವಿಚಾರ ಸದ್ಯಕ್ಕೆ ಇಲ್ಲ’ ಎಂದರು.

‘ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದಾಗಲೆಲ್ಲಾ ನಾನು ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿ ಎತ್ತಿದ್ದೇನೆ. ಅನ್ಯಾಯವಾದರೆ ಈಗಲೂ ಧ್ವನಿ ಎತ್ತುತ್ತೇನೆ. ಅದು ನನ್ನ ಜವಾಬ್ದಾರಿ’ ಎಂದು ಹೇಳಿದರು.

ADVERTISEMENT

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೃತಪಟ್ಟ ಹಸು ಮತ್ತು ಹೋರಿಗಳಿಗೆ ಮಾತ್ರ ಪರಿಹಾರ ಕೊಡುತ್ತಿದ್ದರು. ನಮ್ಮ ಭಾಗದಲ್ಲಿ ಎಮ್ಮೆ ಮತ್ತು ಕೋಣಗಳು ಮೃತಪಟ್ಟರೆ ಯಾವುದೇ ಪರಿಹಾರ ಕೊಡುತ್ತಿರಲಿಲ್ಲ. ಆಗ ಎಮ್ಮೆ, ಕೋಣಗಳಿಗೂ ಪರಿಹಾರ ಕೊಡಬೇಕು ಎಂದು ಧ್ವನಿ ಎತ್ತಿದ್ದೆ. ಆ ನಂತರ ಪರಿಹಾರ ನೀಡಿದರು ಎಂದು ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಕೃಷ್ಣ ನದಿ ಹರಿಯುತ್ತದೆ. ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕವನ್ನು ನೀರಾವರಿಗೆ ಒಳಪಡಿಸಬೇಕಾಗಿದೆ. ಬೇಕಿದ್ದರೆ ಕೃಷ್ಣ ನದಿಯಿಂದ ಬೆಂಗಳೂರಿಗೆ 200 ಟಿಎಂಸಿ ಅಡಿ ನೀರನ್ನು ಕೊಡಲು ಸಿದ್ಧರಿದ್ದೇವೆ’ ಎಂದರು.

‘ನನಗೆ ಈ ಖಾತೆ ತೃಪ್ತಿ ಇದೆ. ವಿಶೇಷ ಖಾತೆಯನ್ನೇ ಮುಖ್ಯಮಂತ್ರಿ ನೀಡಿದ್ದಾರೆ. ಇಂತಹ ಖಾತೆ ಬೇಡಿದರೂ ಸಿಗುವುದಿಲ್ಲ. ರಾಜ್ಯದ 4.36 ಕೋಟಿ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುವುದು.

ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಸಚಿವ ಉಮೇಶ್ ಕತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.