ADVERTISEMENT

ತುಮಕೂರು| ಉರ್ದು ಶಾಲೆಗಿಲ್ಲ ಸ್ವಂತ ಕಟ್ಟಡ: 6 ವರ್ಷದಿಂದ ಬಾಡಿಗೆಯೂ ಪಾವತಿಸಿಲ್ಲ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:04 IST
Last Updated 9 ಡಿಸೆಂಬರ್ 2025, 6:04 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿದರು
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿದರು   

ತುಮಕೂರು: ಜಿಲ್ಲೆಯಲ್ಲಿ ಬಹುತೇಕ ಉರ್ದು ಶಾಲೆಗಳು ಇನ್ನೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ 5–6 ವರ್ಷಗಳಿಂದ ಇವುಗಳ ಬಾಡಿಗೆಯೇ ಪಾವತಿಸಿಲ್ಲ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಲ್ಲಿ ಪಿಎಂ 15 ಅಂಶಗಳ ಕಾರ್ಯಕ್ರಮ ಸಮಿತಿ ಸದಸ್ಯ ರೆಹಮಾನ್‌ ಈ ಕುರಿತು ಪ್ರಸ್ತಾಪಿಸಿದರು.

‘ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ನೂರಾರು ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. ಎಲ್ಲಿಯೂ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಾಲೀಕರನ್ನು ಕೇಳಿದರೆ ಬಾಡಿಗೆ ಕೊಟ್ಟಿಲ್ಲ ಎನ್ನುತ್ತಿದ್ದಾರೆ. 6 ವರ್ಷದಿಂದ ಬಾಡಿಗೆ ಹಣ ಪಾವತಿ ಮಾಡಿಲ್ಲ’ ಎಂದು ಸಭೆಯ ಗಮನಕ್ಕೆ ತಂದರು.

ADVERTISEMENT

‘ಜಿಲ್ಲೆಯಲ್ಲಿ ಎಷ್ಟು ಉರ್ದು ಶಾಲೆಗಳಿವೆ? ಎಷ್ಟು ಸ್ವಂತ ಕಟ್ಟಡಗಳಿವೆ? ಎಷ್ಟಕ್ಕೆ ಬಾಡಿಗೆ ನೀಡಲಾಗುತ್ತಿದೆ?’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಬ್ಬೀರ್‌ ಅಹ್ಮದ್‌ ಅವರನ್ನು ಪ್ರಶ್ನಿಸಿದರು. ಅಧಿಕಾರಿ ಯಾವುದಕ್ಕೂ ಉತ್ತರಿಸಲಿಲ್ಲ. ಮುಂದಿನ ಸಭೆಗೆ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಸೂಚಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೂಡಲೇ ಬಾಡಿಗೆ ಪಾವತಿಸಬೇಕು. ಇಲ್ಲದಿದ್ದರೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು. ಸಹಾಯಧನ ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಬೇಕು ಎಂದು ನಿರ್ದೇಶಿಸಿದರು.

‘ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ರಾತ್ರಿ ವೇಳೆ ಉದ್ಯಾನವನಗಳಲ್ಲಿಯೇ ಉಳಿಯುತ್ತಿದ್ದಾರೆ. ಎಲ್ಲಿಂದ ಬರುತ್ತಾರೆ, ಯಾವ ಪ್ರದೇಶದವರು ಎಂದು ಗೊತ್ತಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ರೆಹಮಾನ್‌ ಒತ್ತಾಯಿಸಿದರು.

‘ಪಾರ್ಕ್‌ಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಪೊಲೀಸ್‌ ಗಸ್ತು ಹೆಚ್ಚಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿ.ಪಂ ಉಪ ಕಾರ್ಯದರ್ಶಿ ಈಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಲಕ್ಷ್ಮಣ ಎಸ್.ಕಳ್ಳೆನ್ನವರ್‌ ಇತರರು ಹಾಜರಿದ್ದರು.

ಶೇ 15 ರಷ್ಟು ಪ್ರಗತಿ ಕೃಷಿ ಇಲಾಖೆಯಲ್ಲಿ ಕಳೆದ ವರ್ಷ ಪಿಎಂ 15 ಅಂಶಗಳ ಕಾರ್ಯಕ್ರಮದ ವಿವಿಧ ಯೋಜನೆಯಡಿ ಶೇ 50 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ. ಈ ಬಾರಿ ಇದುವರೆಗೆ ಕೇವಲ ಶೇ 15 ರಷ್ಟು ಪ್ರಗತಿ ಆಗಿದೆ. ಕನಿಷ್ಠ ಶೇ 75 ರಷ್ಟು ಗುರಿ ಸಾಧಿಸಬೇಕಿತ್ತು. ಯಾವುದೇ ಇಲಾಖೆಯಲ್ಲಿ ಇಷ್ಟು ಗುರಿ ಸಾಧಿಸಲು ಆಗಿಲ್ಲ. ವರ್ಷಾಂತ್ಯಕ್ಕೆ ಶೇ 100 ರಷ್ಟು ಕೆಲಸಗಳು ಮುಗಿಯಬೇಕು.
ಶುಭ ಕಲ್ಯಾಣ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.