ADVERTISEMENT

ಎಸ್ಸೆಸ್ಸೆಲ್ಸಿ: 2,500 ವಿದ್ಯಾರ್ಥಿಗಳಿಂದ ಝೂಂ ಬಳಕೆ

ಐದು ವಿಧದಲ್ಲಿ ವಿದ್ಯಾರ್ಥಿಗಳೊಂದಿಗೆ ಇಲಾಖೆ ಸಂಪರ್ಕ

ಅಭಿಲಾಷ ಬಿ.ಸಿ.
Published 14 ಜೂನ್ 2020, 10:24 IST
Last Updated 14 ಜೂನ್ 2020, 10:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಜೂನ್‌ 28ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆಗಳು ಶುರುವಾಗಿದ್ದು, ಆನ್‌ಲೈನ್‌ನಲ್ಲೇ ಕಲಿಕೆ, ಪುನರ್‌ಮನನ ಪ್ರಕ್ರಿಯೆಯೂ ನಡೆದಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸುತ್ತಿರುವ 21,481 ವಿದ್ಯಾರ್ಥಿಗಳನ್ನು ಐದು ವಿಧದಲ್ಲಿ ಶಿಕ್ಷಣ ಇಲಾಖೆ ಸಂಪರ್ಕಿಸಿ ಮಾಹಿತಿ ನೀಡುತ್ತಿದೆ.

ಇಲಾಖೆಯು ಮುಖ್ಯಶಿಕ್ಷಕರ ನೇತೃತ್ವದಲ್ಲಿ ವಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಿ ಆ ಮೂಲಕ ವಿದ್ಯಾರ್ಥಿಗಳಿಗೆ ಸಿದ್ಧತೆಯ ಪಾಠಗಳನ್ನು ಹೇಳುತ್ತಿದೆ. ಅದರೊಂದಿಗೆ, ಝೂಂ ಆಪ್‌ ಮೂಲಕವೂ ಕಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಫೋನ್‌–ಇನ್‌, ಚಂದನ ವಾಹಿನಿಯ ಕಾರ್ಯಕ್ರಮಗಳಲ್ಲೂ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.

ಝೂಂ ಆ್ಯಪ್‌ನಲ್ಲಿ ಅತ್ಯಲ್ಪ ಅಂದರೆ2,500 ವಿದ್ಯಾರ್ಥಿಗಳು ಮಾತ್ರ ಪಾಠ ಕೇಳಿದ್ದಾರೆ. ಫೋನ್‌–ಇನ್‌ ಮೂಲಕ 20 ಸಾವಿರ ವಿದ್ಯಾರ್ಥಿಗಳು ಮಾಹಿತಿ ಪಡೆದಿದ್ದಾರೆ.

ADVERTISEMENT

ಆನ್‌ಲೈನ್‌ ಸಂಪರ್ಕಕ್ಕೆ ಸಿಗದ ವಿದ್ಯಾರ್ಥಿಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ ‘ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಶೇ 3ರಿಂದ 4ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದರೆ ಅವರ ಮನೆ ಬಾಗಿಲಿಗೆ ಶಿಕ್ಷಕರು ತೆರಳಿ ಪಾಠ ಮಾಡುತ್ತಿದ್ದಾರೆ. ಆಂಡ್ರಾಯ್ಡ್‌ ಮೊಬೈಲ್‌ ಇಲ್ಲದ ವಿದ್ಯಾರ್ಥಿಗಳು ಅವರ ಮನೆ ಸಮೀಪದಲ್ಲಿ ಮೊಬೈಲ್‌ ಹೊಂದಿರುವ ಸಹಪಾಠಿಗಳ ಮನೆಗಳಿಗೆ ತೆರಳಿ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಫೋನ್‌, ಟಿ.ವಿ, ಇಂಟರ್‌ನೆಟ್‌ ಸಂಪರ್ಕ ಇಲ್ಲದ ವಿದ್ಯಾರ್ಥಿಗಳು ನೇರವಾಗಿ ಸಹಾಯವಾಣಿಗೆ ಕೆರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ ಸಡಿಲಿಕೆ ನಂತರ ಬಹುತೇಕ ಶಿಕ್ಷಕರು ಗ್ರಾಮಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿಯಾಗಿ ಬೋಧಿಸುತ್ತಿದ್ದಾರೆ. ಯಾವೊಬ್ಬ ವಿದ್ಯಾರ್ಥಿಯು ಸಂಪರ್ಕದಿಂದ ಹೊರತಾಗಿಲ್ಲ. ಐದು ವಿಧದಲ್ಲಿ ಯಾವುದಾದರೂ ಒಂದರಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.

ಸಾರಿಗೆ: ತುಮಕೂರು ಶೈಕ್ಷಣಿಕ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಈಗಾಗಲೇ ಸಂಪರ್ಕಿಸಿದ್ದು, ಪರೀಕ್ಷಾ ಕೇಂದ್ರಕ್ಕೆ ಹೇಗೆ ಬರುತ್ತಾರೆ ಎಂಬ ಮಾಹಿತಿ ಪಡೆದಿದ್ದಾರೆ. ಶೇ 60ರಷ್ಟು ವಿದ್ಯಾರ್ಥಿಗಳನ್ನು ಪೋಷಕರೇ ಪರೀಕ್ಷಾ ಕೇಂದ್ರಕ್ಕೆ ಕರೆತರಲಿದ್ದಾರೆ. 25ರಷ್ಟು ಮಕ್ಕಳು ಕೆಎಸ್‌ಆರ್‌ಟಿಸಿ ಬಸ್‌ಗೆ ಬೇಡಿಕೆ ಸಲ್ಲಿಸಿದ್ದಾರೆ. ಬಸ್‌ ಮಾರ್ಗವೂ ಇಲ್ಲದ, ಪೋಷಕರು ಕರೆತರಲು ಸಾಧ್ಯವಾಗದ ವಿದ್ಯಾರ್ಥಿಗಳನ್ನು ಖಾಸಗಿ ಶಾಲೆ ಬಸ್‌ ಬಳಸಿ ಕರೆತರಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.