ತುಮಕೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಮನೆ, ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು.
ನಗರದ ಬಿ.ಎಚ್.ರಸ್ತೆಯ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ಸಾರ್ವಜನಿಕರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು. ದೇವಿಗೆ ಹೂವು, ಹಣ್ಣು ಅರ್ಪಿಸಿ ಧನ್ಯತೆ ಮೆರೆದರು. ಶ್ರದ್ಧಾ ಭಕ್ತಿಯಿಂದ ನಮಿಸಿದರು.
ಬಟವಾಡಿ ಬಳಿಯ ಮಹಾಲಕ್ಷ್ಮಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ದೇವಸ್ಥಾನ, ದೇವರ ಮೂರ್ತಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಜೆ.ಸಿ.ರಸ್ತೆಯ ಅನ್ನಪೂರ್ಣೇಶ್ವರಿ ದೇವಿಗೆ ಹಬ್ಬದ ಪ್ರಯುಕ್ತ ವಿಶೇಷವಾಗಿ ನೋಟಿನ ಅಲಂಕಾರ ಮಾಡಲಾಗಿತ್ತು. ₹10, ₹20, ₹50, ₹100 ನೋಟುಗಳಿಂದ ಹಾರ ತಯಾರಿಸಲಾಗಿತ್ತು.
ಹಬ್ಬ ಆಚರಣೆಗೆ ದೇಗುಲಗಳು ಮತ್ತು ಮನೆಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಶ್ರಾವಣ ಮಾಸದ ಎರಡನೇ ಶುಕ್ರವಾರ ಲಕ್ಷ್ಮಿ ಪೂಜೆಯಲ್ಲಿ ನಿರತರಾಗಿದ್ದರು. ಮನೆ, ಅಂಗಡಿ ಮಳಿಗೆ, ದೇವಸ್ಥಾನಗಳಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದರು. ಮನೆಗಳಲ್ಲಿ ಲಕ್ಷ್ಮಿ ವಿಗ್ರಹ ಕೂರಿಸಿ, ವಿವಿಧ ಹೂವುಗಳಿಂದ ಸಿಂಗಾರ ಮಾಡಿದ್ದರು.
ಬೆಳಗ್ಗೆಯೇ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿದ್ದರು. ಲಕ್ಷ್ಮಿಗೆ ಕೆಂಪು, ನೀಲಿ, ಹಸಿರು ಮತ್ತು ವಿವಿಧ ಬಣ್ಣದ ಸೀರೆ ತೊಡಿಸಲಾಗಿತ್ತು. ಬಾಳೆ ದಿಂಡು, ಚೆಂಡು, ಸೇವಂತಿ, ವಿವಿಧ ಹೂವುಗಳು ಮತ್ತು ತಳಿರು–ತೋರಣ ಹಾಗೂ ರಂಗೋಲಿಯಿಂದ ಮನೆಗಳನ್ನೂ ಅಲಂಕಾರ ಮಾಡಲಾಗಿತ್ತು. ಕುಟುಂಬದ ಎಲ್ಲ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದಕ್ಕೆ ಪಾತ್ರರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.