ADVERTISEMENT

ಒಳಮೀಸಲಾತಿಗೆ ವಿವಿಧ ಸಮುದಾಯಗಳ ವಿರೋಧ

ಕೊರಚ, ಕೊರಮ ಲಂಬಾಣಿ, ಭೋವಿ ಸಮುದಾಯಗಳ ಒಕ್ಕೂಟ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:18 IST
Last Updated 27 ಸೆಪ್ಟೆಂಬರ್ 2020, 2:18 IST

ತುಮಕೂರು: ‘ಒಳಮೀಸಲಾತಿ ಅಸಂವಿಧಾನಿಕ ಮತ್ತು ಅವೈಜ್ಞಾನಿಕವಾಗಿದೆ. ಯಾವುದೇ ಕಾರಣಕ್ಕೂ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ನಮ್ಮ ಸಮುದಾಯಗಳು ಒಪ್ಪುವುದಿಲ್ಲ’ ಎಂದು ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳ ಒಕ್ಕೂಟದ ಮುಖಂಡರು ನಗರದಲ್ಲಿ ಶನಿವಾರ ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ಹಾಗೂ ಭೋವಿ ಸಮುದಾಯದ ಎಸ್.ಮಂಜುನಾಥ್, ತಾ.ಪಂ ಸದಸ್ಯ ಎಚ್‌.ಎಸ್.ಶಿವಕುಮಾರ್, ಹನುಮಂತರಾಯಪ್ಪ, ಗಿರಿಯಪ್ಪ, ರಾಮಾಂಜಿನಪ್ಪ, ಶ್ರೀನಿವಾಸ್, ಲಂಬಾಣಿ ಸಮುದಾಯದ ಇಂದಿರಾ ದೇನಾನಾಯಕ್, ಚಂದ್ರಾ ನಾಯಕ್, ಪಾಲಿಕೆ ಸದಸ್ಯ ಹಾಗೂ ಕೊರಮ ಸಮುದಾಯದ ಶಿವರಾಮ್, ನಾರಾಯಣಪ್ಪ, ಸತ್ಯಮಂಗಲ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಒಳಮೀಸಲಾಗಿತೆ ವಿರೋಧ ವ್ಯಕ್ತಪಡಿಸಿದರು.

‘ಆಯೋಗದ ವರದಿಯನ್ನು ವಿಧಾನ ಮಂಡಲದಲ್ಲಿ ಚರ್ಚಿಸುವ ಮುನ್ನವೇ ಸ್ಪರ್ಶ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಇವರಿಗೆ ಮೀಸಲಾತಿ ನೀಡುವುದೇ ಅಪರಾಧ ಎನ್ನುವ ರೀತಿ ಬಿಂಬಿಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. 1977ರಲ್ಲಿ ರಾಜ್ಯದಲ್ಲಿ ಲಂಬಾಣಿ, ಭೋವಿ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಅದಕ್ಕೂ ಮುನ್ನ ಈ ಸಮುದಾಯಗಳಿಗೆ ರಾಜ್ಯದಲ್ಲಿ ಮೀಸಲಾತಿ ಅವಕಾಶ ಇರಲಿಲ್ಲ. ಈ ಎರಡು ಸಮುದಾಯಗಳು ಮೀಸಲಾತಿಯನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಾಗಿಲ್ಲ ಎಂದರು.

2008ರಿಂದ ಈ ಸಮುದಾಯಗಳು ರಾಜಕೀಯವಾಗಿ ಪ್ರಾಬಲ್ಯ ಪಡೆಯುತ್ತಿರುವುದನ್ನು ನೆಪಮಾಡಿಕೊಂಡು ಸ್ಪರ್ಶ ಜಾತಿಗಳನ್ನು ಮೀಸಲಾತಿಯಿಂದ ಹೊರಗಿಟ್ಟು, ಒಳ ಮೀಸಲಾತಿ ಜಾರಿಗೊಳಿಸಿ ಎನ್ನುವ ಕೂಗು ಎದ್ದಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮಾಲ, ಮಾದಿಗ ಸಮುದಾಯಗಳು 70 ವರ್ಷಗಳಿಂದ ಮೀಸಲಾತಿ ಪಡೆದು ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿವೆ. ಹೀಗಿದ್ದರೂ ಸ್ಪರ್ಶ, ಅಸ್ಪೃಶ್ಯ ಎನ್ನುವ ಮೂಲಕ ಮೀಸಲಾತಿ ನಿರಾಕರಣೆ ಮತ್ತು ಒಳಮೀಸಲಾತಿಗೆ ಆಗ್ರಹಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.

ಕೊರಚ, ಕೊರಮ, ಲಂಬಾಣಿ, ಭೋವಿ ಸಮುದಾಯಗಳು ಆರ್ಥಿಕ, ಶೈಕ್ಷಣಿಕ, ಉದ್ಯೋಗ ಪಡೆದುಕೊಳ್ಳುವಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳಿಗಿಂತ ಕೆಳಮಟ್ಟದಲ್ಲಿವೆ. ಒಂದು ವೇಳೆ ಸರ್ಕಾರ ಒಳಮೀಸಲಾತಿ ಜಾರಿಗೆ ಮುಂದಾದರೆ ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದುಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.