ADVERTISEMENT

ವೀರಗಾಸೆ ಗಾರುಡಿಗ ವೀರಣ್ಣ

2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 8:25 IST
Last Updated 5 ಜನವರಿ 2021, 8:25 IST
ಸಿ.ವಿ.ವೀರಣ್ಣ
ಸಿ.ವಿ.ವೀರಣ್ಣ   

ಶಿರಾ: ಜಾನಪದ ಕಲಾ ಪ್ರಕಾರದಲ್ಲಿ ವೀರಗಾಸೆ, ವೀರಭದ್ರ ಕುಣಿತ, ಲಿಂಗದೀರರು ಎಂದು ಕರೆಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವ ಸಿ.ವಿ. ವೀರಣ್ಣ ಅವರಿಗೆ 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ದಿವಂಗತ ವೀರಭದ್ರಯ್ಯ ಹಾಗೂ ಗೌರಮ್ಮ ದಂಪತಿಯಪುತ್ರನಾದ ವೀರಣ್ಣ ಅವರು ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಕರ್ನಾಟಕ ಜಾನಪದ ಅಕಾಡೆಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ವೀರಗಾಸೆ ಕುಣಿತದ ಪುನರುಜ್ಜೀವನಕ್ಕಾಗಿ ತನ್ನ ಜೀವನ ಅರ್ಪಿಸಿಕೊಂಡಿರುವ 72 ವರ್ಷದ ಈ ಹಿರಿಯ ಜೀವ ತನ್ನ ಬಾಲ್ಯದಿಂದಲೇ ತನ್ನ ತಂದೆಯಿಂದ ವಂಶಪಾರಂಪರ್ಯವಾಗಿ ವೀರಗಾಸೆ ಕಲಿತು ಅದನ್ನು ಇಳಿ ವಯಸ್ಸಿನಲ್ಲಿ ಸಹ ಪ್ರದರ್ಶನ ನೀಡುತ್ತಿರುವುದು ವಿಶೇಷ.

ADVERTISEMENT

ವೀರಗಾಸೆ ವೀರಣ್ಣ ಎಂದು ಪ್ರಸಿದ್ದರಾಗಿದ್ದು ವೀರಭದ್ರನ ವೇಷ ಧರಿಸಿ ಖಡ್ಗ ಹಿಡಿದು ತಾಳಮದ್ದಳೆಗಳೊಂದಿಗೆ ನಿಂತರೆ ಇವರ ಪ್ರದರ್ಶನಕ್ಕೆ ಸಾಟಿಯೇ ಇಲ್ಲ. ಬಾಲ್ಯದಿಂದ ಬಂದ ವೀರಗಾಸೆ ಪರಂಪರೆಯನ್ನು ಉಳಿಸಲು ತನ್ನ ಪುತ್ರರಾದ ವೀರೇಶ್ ಕುಮಾರ್, ವಿನಯ್ ಕುಮಾರ್ ಹಾಗೂ ನಂದೀಶ್ ಕುಮಾರ್ ಅವರಿಗೆ ವೀರಗಾಸೆ ಕಲಿಸಿ ಅವರಿಂದ ಸಹ ಪ್ರದರ್ಶನ ನೀಡುತ್ತಿದ್ದಾರೆ.

ವೀರಗಾಸೆಯಲ್ಲಿ ರೋಚಕತೆ ಪ್ರದರ್ಶಿಸಿ ಖಡ್ಗದಿಂದ ತೆಂಗಿನಕಾಯಿ ಒಡೆಯುವುದು, ತುಂಬಿದ ಕೊಡವನ್ನು ಹಲ್ಲಿನಿಂದ ಕಚ್ಚಿ ತಿರುಗಿಸುವುದು ಮಾಡುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತಾರೆ.

ಮೈಸೂರು ದಸರಾ, ಹಂಪಿ ಉತ್ಸವ, ಬೆಳಗಾವಿಯಲ್ಲಿ ನಡೆದ ಜಾನಪದ ಜಾತ್ರೆ, ಧಾರವಾಡದಲ್ಲಿ ನಡೆದ ಯುವಜನ ಮೇಳ, 1997ರಲ್ಲಿ ಬೆಂಗಳೂರಿನಲ್ಲಿ ನಡೆದ 4ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ, ತುಮಕೂರಿನಲ್ಲಿ ನಡೆದ ಕಲ್ಪಶ್ರೀ ಉತ್ಸವ, ಜಾನಪದ ತಿರುಗಾಟ, ಶಿರಾದಲ್ಲಿ ನಡೆದ ಯುವ ಜನಮೇಳ, ಗಡಿನಾಡ ಉತ್ಸವ ಸೇರಿದಂತೆ ರಾಜ್ಯದ ವಿವಿಧೆಡೆ ಸಾವಿರಾರು ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ.

ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಜಿಲ್ಲಾಡಳಿತ ಗೌರವಿಸಿದೆ. ವಿವಿಧ ಸಂಘ–ಸಂಸ್ಥೆಗಳು ನಾಟ್ಯ ಭಯಂಕರ, ನಾಟ್ಯ ಕಲಾವಿದ ಬಿರುದು ನೀಡಿ ಸನ್ಮಾನ ಮಾಡಿದೆ. ಈಗ ಜಾನಪದ ಅಕಾಡೆಮಿಯ ಪ್ರಶಸ್ತಿ
ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.