ಗುಬ್ಬಿ: ಸಕಲ ಧರ್ಮಗಳಿಗೆ ಲೇಸು ಬಯಸುವ ವೀರಶೈವ- ಲಿಂಗಾಯತ ಧರ್ಮ ವಿಶ್ವಶ್ರೇಷ್ಠ ಧರ್ಮವಾಗಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಪಟ್ಟಣ ಹೊರವಲಯದ ಹೇರೂರಿನಲ್ಲಿ ತಾಲ್ಲೂಕು ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶರಣರ ಹಾಗೂ ಗುರು ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳ ಮೇಲೆ ರೂಪಗೊಂಡಿರುವ ವೀರಶೈವ ಲಿಂಗಾಯತ ಧರ್ಮ ಪಾಲನೆಯನ್ನು ಕೇವಲ ಮಾತಿನಲ್ಲಿ ಆಡದೆ ಆಚರಣೆಯಲ್ಲಿ ತೋರಬೇಕಿದೆ ಎಂದು ಹೇಳಿದರು.
ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಪ್ರೇಮದಿಂದ ಬೆಳೆಸದೆ ಮೋಹದಿಂದ ಬೆಳೆಸುತ್ತಿದ್ದಾರೆ.
ಶರಣರ ಬದುಕಿನ ಆದರ್ಶಗಳನ್ನು ಮಕ್ಕಳಲ್ಲಿ ತುಂಬಿ ಸಾಮಾಜಿಕ ಚಿಂತನೆಗಳನ್ನು ಬೆಳಸಬೇಕಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಎಸ್.ಆರ್. ನಟರಾಜು ಮಾತನಾಡಿ, ಸದ್ಯ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಸಮುದಾಯದವರು ಕಡ್ಡಾಯವಾಗಿ ವೀರಶೈವ-ಲಿಂಗಾಯತ ಎಂದು ನಮೂದಿಸಿ ಹೆಚ್ಚಿನ ಸವಲತ್ತು ಪಡೆಯಬೇಕು ಎಂದು ಹೇಳಿದರು.
ಕೆಎಎಸ್ ಅಧಿಕಾರಿ ಸೋಮಶೇಖರ್ ಮಾತನಾಡಿ, ಸಮುದಾಯದಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ವೀರಶೈವ-ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಸಮುದಾಯದವರ ಹಕ್ಕುಗಳನ್ನು ಭಿಕ್ಷೆ ಬೇಡಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಾದೃಷ್ಟಕರ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳು ಹಾಗೂ ಸಮುದಾಯದ ನಿವೃತ್ತ ನೌಕರರನ್ನು ಸತ್ಕರಿಸಲಾಯಿತು.
ವೀರಶೈವ-ಲಿಂಗಾಯತ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ರವೀಶ್, ಪದಾಧಿಕಾರಿಗಳು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಯತೀಶ್, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.