ADVERTISEMENT

ಒಗ್ಗೂಡಿ ಸಾಗಲು ವೀರಶೈವ–ಲಿಂಗಾಯತರಿಗೆ ಸಲಹೆ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:34 IST
Last Updated 20 ಅಕ್ಟೋಬರ್ 2025, 4:34 IST
ತಿಪಟೂರಿನಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸತ್ಕಾರ ನಡೆಯಿತು
ತಿಪಟೂರಿನಲ್ಲಿ ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸತ್ಕಾರ ನಡೆಯಿತು   

ತಿಪಟೂರು: ‘ಸಮಾಜದಲ್ಲಿನ ಸಾಮರಸ್ಯ ಹಾಗೂ ಸೌಹಾರ್ದದ ಕೊರತೆಯಿಂದ ರಾಜ್ಯದಲ್ಲಿ ವೀರಶೈವ ಸಮಾಜ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ನಡೆದರೆ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ’ ಎಂದು ಬಾಳೆಹೊನ್ನೂರು ರಂಬಾಪುರಿ ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಪಿ.ಜಿ.ಎಂ ಕಲ್ಯಾಣ ಮಂಟಪದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮದ ಆದರ್ಶಗಳನ್ನು ತಿಳಿದು ಸಮಾಜ ಕಟ್ಟುವ ಕೆಲಸವಾಗಬೇಕು. ಸಮುದಾಯದ ಜನ ಒಗ್ಗೂಡಿ ಗಟ್ಟಿ ಹೆಜ್ಜೆ ಇಡಬೇಕು. ಸ್ವಾಭಿಮಾನ, ಸಂಘಟನೆಯ ವೈಫಲ್ಯದಿಂದಾಗಿ ಸಮಾಜ ಛಿಧ್ರವಾಗುತ್ತಿದೆ. ಸಂಘಟನೆಗೆ ಅಸಾಧ್ಯವಾದದ್ದನ್ನು ಸಾಧ್ಯಮಾಡುವ ಶಕ್ತಿಯಿದೆ ಎಂದು ಹೇಳಿದರು.

ADVERTISEMENT

ಇಂದು ಬಸವಣ್ಣನ ಹೆಸರು ಹೇಳುವವರು ವೀರಶೈವ, ಲಿಂಗಾಯತ ಬೇರೆ ಎಂದು ಹೇಳಿ ದ್ವಂದ್ವ ಹುಟ್ಟು ಹಾಕಿ, ಕಲುಷಿತ ವಾತವರಣ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ಖರ್ಚು ಮಾಡಿ ಶಿಕ್ಷಣ ನೀಡಿದರೂ ಇಂದು ವೃದ್ಧಾಶ್ರಮಕ್ಕೆ ತಂದೆ ತಾಯಿಗಳನ್ನು ಸೇರಿಸುತ್ತಿದ್ದಾರೆ. ಅಂತಹವರಿಗೆ ಧರ್ಮಾಚರಣೆ, ಸಂಸ್ಕಾರಗಳನ್ನು ಕಲಿಸಬೇಕಿದೆ. ವಿದ್ಯಾರ್ಥಿಗಳು ನಿತ್ಯ ಕನಸು ಕಾಣುತ್ತಾ ಸ್ಪಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕಿದೆ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಸ್ವಲ್ಪ ಗೊಂದಲವಿದ್ದು, ಸಮೀಕ್ಷೆ ಸಂದರ್ಭದಲ್ಲಿ ಸಮಾಜದ 52 ಜನ ಶಾಸಕರ ಸಭೆ ನಡೆಸಲಾಗಿತ್ತು, ಗೊಂದಲಗಳನ್ನು ಮಠ ಮಾನ್ಯರ ಹಿರಿಯರು ಬಗೆಹರಿಸಬೇಕಿತ್ತು. ಮೊದಲು ನಾವು ಹಿಂದೂಗಳಾಗಿದ್ದು ನಂತರ ಸಮಾಜ, ಒಳಪಂಗಡಗಳು ನಮೂದಿಸಬೇಕಿತ್ತು ಎಂದರು.

ಕಾರ್ಯಕ್ರಮದಲ್ಲಿ ಡಿ.ಬಿ.ಎಸ್.ಗುರುಸಿದ್ದಪ್ಪ ಚಾರಿಟೀಸ್ ಟ್ರಸ್ಟ್‌ನಿಂದ ಎಸ್ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನಡೆಯಿತು.

ಬೆಸ್ಕಾಂ ಇಂಜಿನಿಯರ್ ಕೆ.ಎಸ್.ಎಂ.ಸ್ವಾಮಿ, ನಗರಸಭೆ ಪ್ರಭಾರ ಅಧ್ಯಕ್ಷ ಮೇಘಾಶ್ರೀ ಭೂಷಣ್, ನಿಕಟ ಪೂರ್ವ ಅಧ್ಯಕ್ಷೆ ಯಮುನಾ ಧರಣೀಶ್, ನಗರಸಭಾ ಸದಸ್ಯರಾದ ಸಂಗಮೇಶ್, ಶಶಿಕಿರಣ್, ಪದ್ಮ ತಿಮ್ಮೇಗೌಡ, ಅಶ್ವಿನಿ ದೇವರಾಜ, ಯೋಗೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ, ಹಾಸನ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ನವಿಲೆ ಪರಮೇಶ್, ತುಮಕೂರು ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಪರಮೇಶ್, ಜಿಲ್ಲಾ ನೌಕರ ಸಂಘದ ಅಧ್ಯಕ್ಷ ರಮೇಶ್, ಬಿಇೊ ತಾರಾಮಣಿ, ರಾಜ್ಯಾಧ್ಯಕ್ಷ ಸೋಮಶೇಖರ, ಕಾರ್ಯದರ್ಶಿ ಪ್ರಸನ್ನಕುಮಾರ್, ಮಾದಿಹಳ್ಳಿ ಪ್ರಕಾಶ್, ಜಲಾಕ್ಷಮ್ಮ, ಮಂಗಳ ಗೌರಮ್ಮ, ತಾಲ್ಲೂಕು ಸಂಘದ ಕಾರ್ಯದರ್ಶಿ ಎಸ್.ಆರ್.ಸ್ವಾಮಿ, ಖಚಾಂಚಿ ಚಿದಾನಂದ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಅನಾವರಣಗೊಂಡ ಬಸವೇಶ್ವರ ಪುತ್ಥಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.