ADVERTISEMENT

ಗುಬ್ಬಿ: ಪಂಚಾಯಿತಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:59 IST
Last Updated 26 ಆಗಸ್ಟ್ 2025, 5:59 IST
ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಹಾಕಿ ಪ್ರತಿಭಟಿಸಲಾಯಿತು
ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಹಾಕಿ ಪ್ರತಿಭಟಿಸಲಾಯಿತು   

ಗುಬ್ಬಿ: ಗ್ರಾಮಸ್ಥರಿಗೆ ಅಗತ್ಯವಿರುವ ಕುಡಿಯುವ ನೀರು ಹಾಗೂ ನಿವೇಶ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಆಡಳಿತಾತ್ಮಕ ವಿಚಾರಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಹಸ್ತಕ್ಷೇಪ ನಡೆಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹರ್ಷನ್ ನೇತೃತ್ವದಲ್ಲಿ ಪಂಚಾಯಿತಿ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡೇನಹಳ್ಳಿ ಗ್ರಾಮದ ಹಲವು ಮನೆಗಳಿಗೆ ಒಂದು ವರ್ಷದಿಂದ ನೀರು ಸರಬರಾಜಾಗದಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಗ್ರಾಮಸ್ಥರು ಹಣಕೊಟ್ಟು ಟ್ಯಾಂಕರ್ ಮೂಲಕ ನೀರು ಪಡೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಹರ್ಷನ್ ಮಾತನಾಡಿ, ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದು ತುರ್ತು ಸೌಕರ್ಯ ಒದಗಿಸಲು ಸಾಧ್ಯವಾಗದಿದ್ದಲ್ಲಿ ಸಾಮಾನ್ಯ ಜನರ ಗತಿ ಏನು. ಎಲ್ಲ ಸದಸ್ಯರ ವಾರ್ಡ್‌ಗಳ ಸಮಸ್ಯೆಗೂ ಸ್ಪಂದಿಸಬೇಕಾಗಿರುವ ಅಧ್ಯಕ್ಷರು ರಾಜಕೀಯ ದುರುದ್ದೇಶದಿಂದ ಸಾರ್ವಜನಿಕರ ಹಿತ ರಕ್ಷಣೆಗೆ ಮುಂದಾಗದಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.

ADVERTISEMENT

ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಹಾಗೂ ಜೆಜೆಎಂ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.