ಕೊರಟಗೆರೆ: ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದು, ಶೀಘ್ರವೇ ಹಣ ಬಿಡುಗಡೆಯಾಗಲಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಎತ್ತಿನಹೊಳೆ ಯೋಜನೆಗೂ ಚಾಲನೆ ದೊರೆಯಲಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ತಾಲ್ಲೂಕಿನ ಕೋಳಾಲ ಹಾಗೂ ತುಂಬಾಡಿ ಗ್ರಾಮಗಳಲ್ಲಿ ನಡೆದ ಕೇಂದ್ರ ಸರ್ಕಾರದ ವಿಶೇಷ ಆಡಳಿತ ಯೋಜನೆಯಡಿ ಅಂಗವಿಕಲರಿಗೆ ಉಚಿತ ಸಾಧನ ಸಲಕರಣೆ ವಿತರಣೆ ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳು ಬಂದ ನಂತರ ಈ ಭಾಗದ ಜನರಿಗೆ ನೀರಿನ ಬರ ಇರುವುದಿಲ್ಲ. ರೈತರು ಆತುರದ ನಿರ್ಧಾರ ಕೈಗೊಂಡು ಜಮೀನುಗಳನ್ನು ಮಾರಾಟ ಮಾಡಲು ಹೋಗಬೇಡಿ. ಜಮೀನು ಕಾಪಾಡಿಕೊಂಡಲ್ಲಿ ಕೆಲವೇ ವರ್ಷಗಳಲ್ಲಿ ಬಂಗಾರ ಬೆಳೆಯುವ ದಿನ ಬರಲಿದೆ. ಇನ್ನೆರಡು ವರ್ಷದಲ್ಲಿ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಪಾವಗಡ, ಮಧುಗಿರಿ, ಕೊರಟಗೆರೆ ಜನರು ರೈಲಿನಲ್ಲಿ ಓಡಾಡಲು ಅನುಕೂಲ ಮಾಡಿಕೊಡಲಾಗುವುದು. ಈ ಯೋಜನೆಗೆ ಈಗಾಗಲೇ ₹5,300 ಕೋಟಿ ಬಿಡುಗಡೆಯಾಗಿದೆ ಎಂದರು.
ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್, ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಾಕ ರವಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜೆ.ಎನ್.ನರಸಿಂಹರಾಜು, ಕೋಳಾಲ ಗ್ರಾ.ಪಂ.ಅಧ್ಯಕ್ಷ ಕೆ.ಜಿ.ಶ್ರೀನಿವಾಸ ಮೂರ್ತಿ, ಉಪಾಧ್ಯಕ್ಷ ಮಹೇಶ್ ನಾಯಕ್, ತುಂಬಾಡಿ ಗ್ರಾ.ಪಂ. ಅಧ್ಯಕ್ಷ ನಟರಾಜು, ಉಪಾಧ್ಯಕ್ಷೆ ಎಲ್.ಲತಾ, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.